ಗುಂಡ್ಲುಪೇಟೆಯಲ್ಲಿ ಒಂದೇ ಕುಟುಂಬದ ಐವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಮೃತರನ್ನು ನಾಗರಾಜ ಭಟ್ಟಾಚಾರ್ಯ (60), ಹೇಮಾಲತಾ (50), ಓಂಕಾರ ಪ್ರಸಾದ್ (35) ನಿಖಿತಾ (28) ಮತ್ತು ಮಗ ಆರ್ಯನ್(4) ಎಂದು ಗುರುತಿಸಲಾಗಿದೆ.
ಮಂಗಳವಾರದಿಂದಲೇ ಪಟ್ಟಣದ ನಂದಿ ರೆಸಿಡೆನ್ಸಿನಲ್ಲಿ ಕುಟುಂಬ ಉಳಿದುಕೊಂಡಿತ್ತು. ಗುರುವಾರ ತಡರಾತ್ರಿ 3 ಗಂಟೆ ಸುಮಾರಿಗೆ ಪಿಸ್ತೂಲ್ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಓಂಕಾರ್ ಪ್ರಸಾದ್ ಪತ್ನಿ ನಿಖಿತಾ ಅವರು ಆರು ತಿಂಗಳ ಗರ್ಭಿಣಿಯಾಗಿದ್ದರು ಎಂದು ಗೊತ್ತಾಗಿದೆ. ಮೈಸೂರಿನ ದಟ್ಟಗಳ್ಳಿಯಲ್ಲಿ ಕುಟುಂಬ ವಾಸವಿತ್ತು.
ಭಟ್ಟಾಚಾರ್ಯ ಹಾಗೂ ಓಂಕಾರ ಅವರು ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡುತ್ತಿದ್ದರು. ಇದರಲ್ಲಿ ನಷ್ಟವದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
3 ದಿನಗಳ ಹಿಂದೆಯೆ ಮನೆ ಬಿಟ್ಟಿದ್ದ ಕುಟುಂಬ
ಮೈಸೂರು: ಗುಂಡ್ಲುಪೇಟೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಸದಸ್ಯರು ಇಲ್ಲಿನ ತಮ್ಮ ದಟ್ಟಗಳ್ಳಿಯ ನಿವಾಸವನ್ನು ಬೀಗ ಹಾಕಿಕೊಂಡು ಮೂರು ದಿನಗಳ ಹಿಂದೆಯೆ ತೆರಳಿದ್ದರು ಎಂದು ಅಕ್ಕಪಕ್ಕದ ನಿವಾಸಿಗಳು ತಿಳಿಸಿದ್ದಾರೆ.
ಇಲ್ಲಿ ಇವರ ಸಂಬಂಧಿಕರು ಯಾರೂ ವಾಸವಾಗಿಲ್ಲ. ನೆರೆಹೊರೆಯವರೊಂದಿಗೆ ಈ ಕುಟುಂಬ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಇವರು ನಡೆಸುತ್ತಿದ್ದ ಟಿವಿ ಇನ್ಫೊಟೆಕ್ ಎಂಬ ಉದ್ಯಮ ನಷ್ಟದಲ್ಲಿ ಇತ್ತು. ಸಾಲದ ಹೊರೆ ಇತ್ತು. ಹೀಗಾಗಿ ಕುಟುಂಬದ ನಾಲ್ವರು ಸದಸ್ಯರಿಗೆ ಮೊದಲು ಗುಂಡಿಕ್ಕಿ, ನಂತರ ಓಂಕಾರಪ್ರಸಾದ್ ತಮಗೆ ತಾವೆ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.