ಮೀನುಗಾರರ ಸಾಲ ಮನ್ನಾ : ಯಡಿಯೂರಪ್ಪ ಅವರಿಗೆ ಸಮುದಾಯದ ಮೇಲಿನ ಕಾಳಜಿಗೆ ಸಾಕ್ಷಿ – ಯಶ್ಪಾಲ್ ಸುವರ್ಣ
ಉಡುಪಿ: ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಮೀನುಗಾರರ ಸಾಲಮನ್ನದ ನಿರ್ಣಯವನ್ನು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಕೈಗೊಂಡಿರುವುದು ಮೀನುಗಾರರ ಮೇಲೆ ಅವರಿಗಿರುವ ಕಾಳಜಿಯನ್ನು ವ್ಯಕ್ತಪಡಿಸುತ್ತದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶಪಾಲ ಸುವರ್ಣ ತಿಳಿಸಿದ್ದಾರೆ.
ಮೀನುಗಾರಿಕೆ ಮತ್ತು ಬಂದರು ಇಲಾಖೆ ಒಂದಕ್ಕೊಂದು ಪೂರಕ ವಾಗಿರುವ ಕಾರಣ ಈ ಎರಡೂ ಇಲಾಖೆಗಳನ್ನು ಒಂದೇ ವ್ಯಕ್ತಿಗೆ ನೀಡಬೇಕು ಆಗ ಮೀನುಗಾರಿಕಾ ಇಲಾಖೆಯ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತವೆ. ಈಗ ಹಲವಾರು ಯೋಜನೆಗಳು ನೆನೆಗುದಿಗೆ ಬೀಳಲು ಈ ಎರಡು ಇಲಾಖೆಗಳ ನಡುವಿನ ಹೊಂದಾಣಿಕೆಯ ಕೊರತೆ ಪ್ರಮುಖ ಕಾರಣವಾಗಿದೆ. ಈ ತಪ್ಪನ್ನು ಮಾನ್ಯ ಮುಖ್ಯಮಂತ್ರಿಗಳು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.ಮೀನುಗಾರರು ಹಲವು ದಶಕಗಳಿಂದ ತಮ್ಮ ಹಲವಾರು ಸಮಸ್ಯೆಗಳ ಬಗ್ಗೆ ಮನವಿಪತ್ರಗಳನ್ನು ಕೊಡುತ್ತಾ ಬಂದಿದ್ದರೂ ಅದರಲ್ಲಿ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಮಾನ್ಯ ಯಡಿಯೂರಪ್ಪ ಅವರು ಮೀನುಗಾರರ ಮೇಲೆ ಇರಿಸಿರುವ ಕಾಳಜಿಯನ್ನು ಕಂಡಾಗ ಈ ಬಾರಿ ನಮ್ಮ ಆಶಯಗಳು ಈಡೇರ ಬಹುದು ಎಂಬ ಆಶಾಭಾವನೆ ಮೂಡಿದೆ. ಕೂಡಲೆ ನಮ್ಮ ಮೀನುಗಾರರ ನಿಯೋಗ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಗ್ರ ಮೀನುಗಾರಿಕಾ ನೀತಿಯ ಬಗ್ಗೆ ಚರ್ಚಿಸಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.