ಕಾಫೀ ಡೇ ಮಾಲೀಕ ಸಿದ್ಧಾರ್ಥ ನದಿಗೆ ಹಾರುವುದನ್ನು ಕಣ್ಣಾರೆ ಕಂಡ ಮೀನುಗಾರ !
ಮಂಗಳೂರು: ಸೇತುವೆಯ 8ನೇ ಕಂಬದಿಂದ ವ್ಯಕ್ತಿಯೊಬ್ಬರು ನೀರಿಗೆ ಹಾರಿದ್ದನ್ನು ಮೀನುಗಾರರೊಬ್ಬರು ಕಣ್ಣಾರೆ ಕಂಡಿದ್ದಾರೆ.
ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹತ್ವದ ಮಾಹಿತಿ ಲಭ್ಯವಾಗಿದೆ. ರಾತ್ರಿ 8 ಗಂಟೆಯ ವೇಳೆಗೆ ವ್ಯಕ್ತಿಯೊಬ್ಬರು ಜಪ್ಪಿನಮೊಗರು ಸೇತುವೆಯಿಂದ ಹಾರಿದ್ದನ್ನು ನಾನು ನೋಡಿದೆ ಎಂದು ಮೀನುಗಾರರೊಬ್ಬರು ನನಗೆ ತಿಳಿಸಿದ್ದಾರೆ ಎಂದು ಉಳ್ಳಾಲ ಶಾಸಕ ಯುಟಿ ಖಾದರ್ ತಿಳಿಸಿದ್ದಾರೆ.
ಸೇತುವೆಯ ಎಂಟನೇ ಕಂಬದ ಮುಂಭಾಗದಿಂದ ವ್ಯಕ್ತಿಯೊಬ್ಬರು ನೀರಿಗೆ ಬಿದ್ದಿದ್ದರು. ನದಿಯಲ್ಲಿ ಸುಮಾರು 50 ಮೀಟರ್ ಅವರು ಸಾಗಿದ್ದಾರೆ. ವ್ಯಕ್ತಿ ನೀರಿಗೆ ಬೀಳುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ ಅವರು ನೀರಿಗೆ ಬೀಳುವಾಗ ನಾನು ಒಬ್ಬನೇ ಇದ್ದೆ. ಹಾಗಾಗಿ ಅವರನ್ನು ರಕ್ಷಿಸಲು ಆಗಲಿಲ್ಲ ಎಂದು ಮೀನುಗಾರನೊಬ್ಬ ಹೇಳಿದ್ದಾರೆ. ಅವರ ಮಾಹಿತಿ ಆಧಾರಿಸಿ ಸೇತುವೆಯ ಎಂಟನೇ ಕಂಬದ ನೇರಕ್ಕೆ ಕಾರ್ಯಾಚರಣೆ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.
ಸೋಮವಾರ ರಾತ್ರಿಯಿಂದ ನಮ್ಮ ಜಿಲ್ಲಾಡಳಿತ, ಪೊಲೀಸರು ಬೇರೆ ಬೇರೆ ತಂಡದವರು ಸಕ್ರಿಯವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅಲ್ಲದೆ ಸೋಮವಾರ ಇಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರಿಂದ ಸಲಹೆ ಹಾಗೂ ಮಾಹಿತಿ ಪಡೆಯುತ್ತಿದ್ದೇವೆ. ಸಿದ್ಧಾರ್ಥ್ ಅವರು ಇಲ್ಲಿಯವರೆಗೆ ಬಂದಿರುವುದು ಎಲ್ಲರಿಗೂ ಗೊತ್ತು. ಬಳಿಕ ಏನಾಗಿದೆ ಎಂದು ಸ್ಪಷ್ಟ ಮಾಹಿತಿ ಇಲ್ಲ ಎಂದು ತಿಳಿಸಿದರು.
ನೀರಿನಲ್ಲಿ ಏನಾದರೂ ಆಗಿರಬಹುದು ಎಂದು ಎಲ್ಲರಿಗೂ ಸಂಶಯ ಇದೆ. ಹಾಗಾಗಿ ನೀರಿನಲ್ಲಿ ಜಾಸ್ತಿ ಪಾಮುಖ್ಯತೆ ಕೊಡಲಾಗುತ್ತಿದೆ. ಬೇರೆ ಕಡೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೇತ್ರಾವತಿ ಸೇತುವೆಯಿಂದ ಸಮುದ್ರಕ್ಕೆ ಒಂದೂವರೆ ಕಿ.ಮೀ ದೂರವಿದೆ. ಮೃತದೇಹ ಸಮುದ್ರಕ್ಕೆ ಮುಟ್ಟಿದ್ದರೆ, ಆಗ ಬಹಳ ಕಷ್ಟವಾಗುತ್ತದೆ. ಈಗಾಗಲೇ ಸಮುದ್ರದ ಬಳಿ ತಂಡ ಸಜ್ಜಾಗಿದೆ. ನದಿ ಸಮುದ್ರ ತಲುಪುವಂತಹ ಜಾಗದಲ್ಲೂ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮಳೆ ಆಗುತ್ತಿರುವುದಿಂದ ಕಾರ್ಯಚರಣೆ ಅಡ್ಡಿಯಾಗುತ್ತಿದೆ. ಆದರೆ ಪ್ರತಿ ತಂಡ ಮಳೆ, ಗಾಳಿ ಎಂದು ಲೆಕ್ಕಿಸದೇ ಕಾರ್ಯಚರಣೆ ನಡೆಸುತ್ತಿದ್ದಾರೆ. ಹೆಲಿಕಾಪ್ಟರ್ ಕೂಡ ತಂದು ಇಟ್ಟಿದ್ದಾರೆ. ಹವಾಮಾನ ನೋಡಿ ಅಗತ್ಯ ಬಂದರೆ ಅದನ್ನು ಉಪಯೋಗಿಸಲಾಗುವುದು. ಹೆಲಿಕಾಪ್ಟರ್ ಬಳಸಲು ಸಲಹೆ ಸೂಚನೆ ಪಡೆಯುತ್ತಿದ್ದೇವೆ ಎಂದರು.