ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ನೆರವು: ವಿಶಿಷ್ಟ ಕೃಷ್ಣ ಜಯಂತಿ ಆಚರಿಸಿದ ಬನ್ನಂಜೆ ಆಚಾರ್ಯರು
ತನ್ನ ಪೂರ್ತಿ ಜೀವನವನ್ನು ಶ್ರೀಕೃಷ್ಣನ ತತ್ತ್ವ ಮತ್ತು ಸಂದೇಶ ಪ್ರಸಾರಕ್ಕಾಗಿ ಮುಡಿಪಾಗಿಟ್ಟ ನಾಡಿನ ವಾಙ್ಮಯ ಶ್ರೇಷ್ಠರೂ ‘ ಪದ್ಮಶ್ರೀ ‘ ಪ್ರಶಸ್ತಿ ಪುರಸ್ಕೃತ ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದ ಪಂಡಿತಾಚಾರ್ಯರು, ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದಿಂದ ಸಂತ್ರಸ್ತರ ಪರಿಹಾರ ನಿಧಿಗೆ ನಿರ್ದಿಷ್ಟ ಮೊತ್ತದ ದೇಣಿಗೆ ನೀಡಿ ಆರ್ತ ಜನರಕ್ಷಕ , ಆಪದ್ಭಾಂಧವ, ಅನಾಥರಕ್ಷಕ ಶ್ರೀಕೃಷ್ಣನ ಜಯಂತಿಯನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಿಕೊಂಡರು .
ಶುಕ್ರವಾರ ತಮ್ಮ ನಿವಾಸಕ್ಕೆ ನೂತನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರು ಔಪಚಾರಿಕ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಉಭಯ ಕುಶಲೋಪರಿ ನಡೆಸಿದ ಸಂದರ್ಭದಲ್ಲಿ ಆಚಾರ್ಯರು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ಒಂದು ಲಕ್ಷರೂಗಳ ನೆರವಿನ ಚೆಕ್ ಸಚಿವರಿಗೆ ಹಸ್ತಾಂತರಿಸಿದರು.
ಇದಕ್ಕೆ ಪ್ರತಿಕ್ರಿಯಿಸರುವ ಸಚಿವ ಪೂಜಾರಿಯವರು ಸಮಾಜದಲ್ಲಿ ಅನಾಚಾರಗಳೇ ವಿಜೃಂಬಿಸುತ್ತಿರುವವುದನ್ನು ನೋಡುವ ಪ್ರತಿಕೂಲ ಸ್ಥಿತಿಯಲ್ಲಿ ಆಚಾರ್ಯರಂಥಹ ಜ್ಞಾನಿಗಳು ಮತ್ತು ಸಜ್ಜನರ ಸಂವೇದನಾ ಶೀಲತೆಗಳೂ ಸಾಂದರ್ಭಕವಾಗಿ ಲೋಕದ ಒಳಿತಿಗೆ ಸ್ಪಂದಿಸುವಷ್ಟು ಕ್ರಿಯಾಶೀಲವಾಗಿವೆ ಎಂಬ ವಿಚಾರಗಳು ನೆಮ್ಮದಿಯನ್ನು ನೀಡುತ್ತವೆ . ಅವರು ನೀಡಿದ ಮೊತ್ತಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆಚಾರ್ಯರು ಬಹುಕಾಲ ನಮ್ಮೊಂದಿಗೆ ನೆಮ್ಮದಿಯಿಂದ ಜೀವಿಸಿ ಮಾರ್ಗದರ್ಶನ ನೀಡುವಂತಾಗಬೇಕು ಎಂದು ಹಾರೈಸುತ್ತೇನೆ ಎಂದರು.
ಆಚಾರ್ಯರ ಪುತ್ರ ವಿನಯ ಆಚಾರ್ಯ ಮತ್ತು ರಮಾ ದಂಪತಿ ಸಚಿವರನ್ನು ಪ್ರೀತಿಯಿಂದ ಮನೆಗೆ ಬರಮಾಡಿಕೊಂಡರು.