ಮರ ಕಡಿದು ಅಂತರ್ಜಲಕ್ಕೆ ಕೈಹಾಕಿದ್ದೇ ಸಮಸ್ಯೆಯ ಮೂಲ: ಪ್ರೊ.ಬಾಲಕೃಷ್ಣ ಮುದ್ದೋಡಿ

ಉಡುಪಿ: ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ತೆವಳುವಂತೆ, ತೆವಳುವ ನೀರನ್ನು ನಿಲ್ಲಿಸಿ ಇಂಗಿಸುವಂತೆ ಮಾಡಿದರೆ ಇದಕ್ಕಿಂತ ದೊಡ್ಡ ಕೊಡುಗೆ ಯಾವುದೂ ಇಲ್ಲ. ಅಂತರ್ಜಲವೆಂಬುದು ರಿಸರ್ವ್ ವಾಟರ್ ಆಗಿದ್ದು, ಇದು ನಮ್ಮದಲ್ಲ. ನಮ್ಮದಲ್ಲದ್ದಕ್ಕೆ ನಾವು ಕೈಹಾಕಿದರೆ ಹವಾಮಾನ ಬದಲಾವಣೆಯೊಂದಿಗೆ ಜನಜೀವನ ಗಂಭೀರ ಸ್ಥಿತಿ ತಲುಪಲಿದೆ. ಪ್ರಸ್ತುತ ಆಗಿರುವುದು ಇದುವೆ ಎಂದು ಜಲತಜ್ಙ, ಮಣಿಪಾಲ ಎಂಐಟಿಯ ಪ್ರೊ. ಬಾಲಕೃಷ್ಣ ಮೊದ್ದೋಡಿ ತಿಳಿಸಿದರು.

ಕುರ್ಕಾಲು ಸುಭಾಸ್‌ನಗರದ ಫೆರ್ನಾಂಡಿಸ್ ಕಾಂಪೌಂಡಿನಲ್ಲಿ ಅಗೋಸ್ತು 18ರಂದು ನಡೆದ ‘ಚಿಂತನ ವೇದಿಕೆ’ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಜಲ ಸಂರಕ್ಷಣೆ’ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ 16 ಸಾವಿರಕ್ಕೂ ಅಧಿಕರ ಮರಗಳ ಮಾರಣ ಹೋಮ ನಡೆಸಲಾಗಿದೆ. ಮರಗಳ ಬೇರುಗಳ ಮೂಲಕ ಅಂತರ್ಜಲ ವೃದ್ಧಿಯಾಗುವುದಾಗಿದ್ದು, ಮರಗಳನ್ನೇ ನಾಶಮಾಡಿದರೆ ಅಂತರ್ಜಲ ನಾಶವಾಗುವುದು ಖಚಿತ. ಇದೇ ಸಂದರ್ಭದಲ್ಲಿ, ಜಿಲ್ಲೆಯಾದ್ಯಂತ ಸಾವಿರಕ್ಕೂ ಅಧಿಕ ಮದಗ, ಕೆರೆ, ಬಾವಿಗಳನ್ನು ಅಭಿವೃದ್ಧಿಯ ಹೆಸರಲ್ಲಿ ಮುಚ್ಚಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಇನ್ನಾದರೂ ಪ್ರತಿಯೊಬ್ಬನೂ ಜಲ ಸಂರಕ್ಷಣೆಯ ಕಡೆಗೆ ಗಮನಕೊಡದೇ ಕಡೆಗಣಿಸಿದಲ್ಲಿ ಎಲ್ಲರೂ ಅಪರಾಧಗಳೇ ಆಗುತ್ತಾರೆ. ಮಾತ್ರವಲ್ಲ ಮುಂದಿನ ಜನಾಂಗ ಎಂದಿಗೂ ಕ್ಷಮಿಸಲಾರದು ಎಂದು ಪ್ರೊ. ಬಾಲಕೃಷ್ಣ ಮುದ್ದೋಡಿ ಹೇಳಿದರು.

ನಿವೃತ್ತ ಮುಖ್ಯೋಪಾಧ್ಯಾಯರಾದ ಮೋಹನದಾಸ ಆರ್. ಶೆಟ್ಟಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ನೂತನ ಸಂಸ್ಥೆಯಾದ ‘ಚಿಂತನ ವೇದಿಕೆ’ಯನ್ನು ಉದ್ಘಾಟಿಸಿದರು. ಚಿಂತಕರಾದ ರಾಯನ್ ಮಥಾಯಸ್ ಅಧ್ಯಕ್ಷತೆ ವಹಿಸಿದ್ದರು. ಚಿಂತನ ವೇದಿಕೆಯ ಸಂಚಾಲಕರಾದ ರಾಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಚಿದಾನಂದ ಪೂಜಾರಿ ಗೀತಗಾಯನ ನಡೆಸಿಕೊಟ್ಟರು. ಶ್ರೀರಾಮ ದಿವಾಣ ಪ್ರಸ್ತಾವನೆಗೈದರು

Leave a Reply

Your email address will not be published. Required fields are marked *

error: Content is protected !!