ಫರಂಗಿಪೇಟೆ: ಮಸೀದಿಗೆ ನುಗ್ಗಿದ ಕಾರು; ಆರು ಮಂದಿಗೆ ಗಾಯ
ಬಂಟ್ವಾಳ, : ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ಕಾರೊಂದು ಮಸೀದಿಯ ಆವರಣ ಗೋಡೆಯೊಳಗೆ ನುಗ್ಗಿದ ಪರಿಣಾಮ ಚಾಲಕ ಸೇರಿ ಒಟ್ಟು ಆರು ಮಂದಿ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪದ 10 ನೇ ಮೈಲುಕಲ್ಲು ಎಂಬಲ್ಲಿ ಮಂಗಳವಾರ ನಡೆದಿದೆ.
ಫರಂಗಿಪೇಟೆ ನಿವಾಸಿಗಳಾದ ನಿವಾಸಿ ಇಸ್ಮಾಯೀಲ್, ಸುಲೈಮಾನ್, ಕಾರಿನಲ್ಲಿದ್ದ ಪ್ರಯಾಣಿಕರಾದ ಮೋನಪ್ಪ, ಸುಶೀಲ, ನಿರ್ಮಲ ಹಾಗೂ ರಘುರಾಮ ಎಂಬವರು ಗಾಯಗೊಂಡವರಾಗಿದ್ದು, ಇವರು ಪುತ್ತೂರು ನಿವಾಸಿಗಳೆಂದು ತಿಳಿದುಬಂದಿದೆ. ಗಾಯಾಳುಗಳಾದ ಇಸ್ಮಾಯೀಲ್, ಸುಲೈಮಾನ್ ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯ ವಿವರ :
ಪ್ರಸಾದ್ ನೇತ್ರಾಲಯಕ್ಕೆ ಸೇರಿದ ಓಮ್ನಿ ಕಾರೊಂದು ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿರುವಾಗ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫರಂಗಿಪೇಟೆ ಸಮೀಪದ ಹತ್ತನೇ ಮೈಲು ಕಲ್ಲು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಪರಿಣಾಮ ಹೆದ್ದಾರಿ ಪಕ್ಕದಲ್ಲಿರುವ ತ್ವಾಹಾ ಜುಮಾ ಮಸೀದಿಯ ಆವರಣದೊಳಗೆ ನುಗ್ಗಿ ಇನ್ನೊಂದು ಬದಿಯ ಆವರಣ ಗೋಡೆಯಾಗಿ ಏರಿ ನಿಂತಿದೆ. ಈ ವೇಳೆ ಮಸೀದಿ ಆವರಣದಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಘಟನೆಯಿಂದ ಕಾರಿನ ಮುಂಭಾಗ ಜಖಂಗೊಂಡಿದ್ದು, ಮಸೀದಿಗೂ ಹಾನಿಯಾಗಿದೆ. ಅಪಘಾತ ದೃಶ್ಯ ಮಸೀದಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ, ಪರಿಶೀಲನೆ ನಡೆಸಿದ್ದಾರೆ.