ರಾಜ್ಯದಲ್ಲಿ ಫೋಟೊಗ್ರಫಿ ಅಕಾಡೆಮಿ ಸ್ಥಾಪನೆ: ರಘುಪತಿ ಭಟ್‌

ಉಡುಪಿ: ‘ಫೋಟೊಗ್ರಫಿ ಕ್ಷೇತ್ರ ಹಾಗೂ ಯುವಕರಿಗೆ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ರಾಜ್ಯದಲ್ಲಿ ಫೋಟೊಗ್ರಫಿ ಅಕಾಡೆಮಿ ಸ್ಥಾಪಿಸುವಂತೆ ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಶಾಸಕ ಕೆ.ರಘುಪತಿ ಭಟ್‌ ಹೇಳಿದರು.

ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಭಾನುವಾರ ನಡೆದ ಸೌತ್‌ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್‌ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ 29ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಕಾಡೆಮಿ ಸ್ಥಾಪನೆಯಿಂದ ಫೋಟೊಗ್ರಫಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನ ಆಗಬೇಕು. ಆ ರೀತಿಯ ಕರಡನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು. ಅದಕ್ಕಾಗಿ ಈಗಾಗಲೇ ಸ್ಥಾಪನೆಯಾಗಿರುವ ತೆಲಂಗಾಣ ರಾಜ್ಯದ ಫೋಟೊಗ್ರಫಿ ಅಕಾಡೆಮಿಯ ಕರಡನ್ನು ತರಿಸಿಕೊಂಡು ಅಧ್ಯಯನ ಮಾಡಬೇಕು’ ಎಂದರು.

ಸಂಘದ ಅಧ್ಯಕ್ಷ ವಿಲ್ಸನ್‌ ಜಾರ್ಜ್‌ ಗೋನ್ಸಾಲ್ವಿಸ್‌ ಅಧ್ಯಕ್ಷತೆ ವಹಿಸಿದ್ದರು. ಛಾಯಾಚಿತ್ರ ಮತ್ತು ವಸ್ತುಪ್ರದರ್ಶನವನ್ನು ಎಸ್‌ಕೆಪಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ. ವಾಸುದೇವ ರಾವ್‌ ಉದ್ಘಾಟಿಸಿದರು. ಎಸ್‌ಕೆಪಿಎ ಸಲಹಾ ಸಮಿತಿಯ ಅಧ್ಯಕ್ಷ ವಿಠಲ ಚೌಟ ಧ್ವಜಾರೋಹಣ ನೆರವೇರಿಸಿದರು.

ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿಯನ್ನು ವಿತರಿಸಲಾಯಿತು. ಹಿರಿಯ ಛಾಯಾಚಿತ್ರಗ್ರಾಹಕರಾದ ಶೇಖರ್‌ ಕಾರ್ಕಳ, ಪಾಲಾಕ್ಷ ಪಿ. ಸುವರ್ಣ ಬೆಳ್ತಂಗಡಿ ಅವರನ್ನು ಸನ್ಮಾನಿಸಲಾ ಯಿತು. ಬಡಗಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಸಿಂಧನೂರು ಸಂಘದ ವೆಂಕಟೇಶ ಕೆಂಗಲ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ್‌, ಕೋಶಾಧಿಕಾರಿ ಶ್ರೀಧರ ಶೆಟ್ಟಿಗಾರ್‌, ಪದಾಧಿಕಾರಿಗಳಾದ ಜಯಕರ ಸುವರ್ಣ, ಜನಾರ್ದನ ಕೊಡವೂರು ಉಪಸ್ಥಿತರಿದ್ದರು.ಉಪಾಧ್ಯಕ್ಷ ಪ್ರಮೋದ್‌ ಸುವರ್ಣ ಕಾಪು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್‌.ಕೆ.ನಾಯನಾಡು ಹಾಗೂ ರಾಘವೇಂದ್ರ ಉಡುಪಿ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *

error: Content is protected !!