ಕಾಡಾನೆ ದಾಳಿಯಿಂದ ವಿದ್ಯಾರ್ಥಿಗೆ ಗಂಭೀರ ಗಾಯ : ಬಿಟ್ಟಂಗಾಲ ಗ್ರಾಮದಲ್ಲಿ ಘಟನೆ
ಮಡಿಕೇರಿ: ಕಾಡಾನೆಯ ದಾಳಿಗೆ ಸಿಲುಕಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬ ಗಂಭೀರ ಗಾಯಗೊಂಡು ಘಟನೆ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ.
ಬಿಟ್ಟಂಗಾಲ ಗ್ರಾಮದ ನಿವಾಸಿ ಬಿ.ಎ.ಸುಭಾಷ್ ಚಂದ್ರ ಮತ್ತು ನೇತ್ರಾವತಿ ದಂಪತಿಗಳ ಪುತ್ರ ಚಂದನ್ ಬಿ.ಎಸ್. (11) ಎಂಬಾತನೆ ಗಾಯಗೊಂಡ ವಿದ್ಯಾರ್ಥಿ. ಕಾಡಾನೆ ದಾಳಿಯಿಂದ ಈತನ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬಿಟ್ಟಂಗಾಲ ಗ್ರಾಮದ ಅಂಬಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಳಗ್ಗೆ ಸುಭಾಷ್‌ಚಂದ್ರ ಅವರ ಮಕ್ಕಳಾದ ಚಂದನ್, ಈತನ ಸಹೋದರ ಕೀರ್ತನ್, ತಂಗಿ ಶಾಲಿನಿ ಮತ್ತು ಸುಭಾಷ್ ಚಂದ್ರ ಅವರ ತಮ್ಮನ ಮಗ ಪವನ್ ಅವರು ತೆರಳುತ್ತಿದ್ದರು. ಇವರು ಶಾಲೆಗೆ ತೆರಳುವ ಮಾರ್ಗದ ಸಮೀಪದ ಆಲ್ಬರ್ಟ್ ಎಂಬವರ ತೋಟದಲ್ಲಿ ಐದು ಕಾಡಾನೆಗಳ ಹಿಂಡು ಬೀಡುಬಿಟ್ಟಿತ್ತು ಎನ್ನಲಾಗಿದೆ.
ಮಕ್ಕಳು ಶಾಲೆಯತ್ತ ಸಾಗುತ್ತಿದ್ದ ಸಂದರ್ಭ ಹಠಾತ್ತನೆ ಕಾಡಾನೆಯೊಂದು ಮಕ್ಕಳ ಮೇಲೆ ದಾಳಿ ನಡೆಸಿ, ಚಂದನ್‌ನನ್ನು ಸೊಂಡಿಲಿನಿಂದ ಎತ್ತಿ ಒಗೆದಿದೆ. ಈ ಹಂತದಲ್ಲಿ ಭಯಭೀತರಾದ ಸಹಪಾಠಿಗಳು ಜೋರಾಗಿ ಕಿರುಚಿಕೊಂಡು ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿ, ಸುತ್ತಮುತ್ತಲಿನ ಮನೆಮಂದಿಗೆ ವಿಷಯ ಮುಟ್ಟಿಸಿದರು.
ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಗಾಯಗೊಂಡಿದ್ದ ಚಂದನ್‌ನನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಡಿಕೇರಿಯ ಜಿಲ್ಲಾಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.