ಉತ್ತರದೊಂದಿಗೆ ಉಡುಪಿ ಟೈಮ್ಸ್ ಅಭಿಯಾನಕ್ಕೆ ಚಾಲನೆ
ಉಡುಪಿ- ” ಮಾಧ್ಯಮಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದುವುದು ಮಾತ್ರವಲ್ಲದೆ ಸಮಾಜ ಮುಖಿ ಕಾರ್ಯಗಳನ್ನು ಮಾಡಲು ಸಾಧ್ಯ ಎಂಬುದನ್ನುಉಡುಪಿ ಟೈಮ್ಸ್ ಕನ್ನಡ ವೆಬ್ ಸೈಟ್ ಮಾಡಿ ತೋರಿಸಿ ಸಮಾಜಕ್ಕೆ ಮಾದರಿಯಾಗಿದೆ ” ಎಂದು ಖ್ಯಾತ ಹೋಟೆಲ್ ಉದ್ಯಮಿ ವಿಶ್ವನಾಥ ಶೆಣೈ ತಿಳಿಸಿದರು . ನೆರೆ ಪೀಡಿತ ಉತ್ತರಕರ್ನಾಟಕಕ್ಕೆ ಸುಮಾರು 2.80 ಲಕ್ಷದಷ್ಟು ಮೊತ್ತದ ಪರಿಹಾರ ಸಾಮಾಗ್ರಿಗಳನ್ನು ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೇವಲ ಎರಡು ತಿಂಗಳಿನಲ್ಲಿ ಉಡುಪಿ ಟೈಮ್ಸ್ ಜನರ ಗಮನ ಸೆಳೆದಿದ್ದು, ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ವಿತರಿಸುವ ಮಾನವೀಯತೆ ಸೇವೆಯಿಂದಾಗಿ ಜನರಿಗೆ ಆಪ್ತವಾಗಿದೆಂದು ಶೆಣೈಯವರು ಈ ಸಂದರ್ಭ ಹೇಳಿದರು.
ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ ಮಾತನಾಡಿ ಉಡುಪಿ ಟೈಮ್ಸ್ ಮಾಧ್ಯಮ ಈ ರೀತಿಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಕೇವಲ ಸುದ್ದಿಗಳ ಹಿಂದೆ ಓಡದೆ ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ಮಾಡಿ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಈ ಮಾಧ್ಯಗಳ ಜೊತೆ ಕೈ ಜೋಡಿಸಿದ ಸಂಘ ಸಂಸ್ಥೆಗಳ ಕೆಲಸವೂ ಪ್ರಶಂಸನಿಯಾ ಎಂದರು. ಈ ಸಂದರ್ಭದಲ್ಲಿ ಶಿರ್ವ ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ದಯಾನಂದ ,ಸದಸ್ಯ ಮಹಮ್ಮದ್ ಫಾರೂಕ್ , ಬನ್ನಂಜೆ ನಾರಯಣಗುರು ಸಭಾ ಭವನ ಆಡಳಿತ ಮಂಡಳಿಯ ಅಧ್ಯಕ್ಷ ನರಸಿಂಹ ಸುವರ್ಣ, ಕಾರ್ಯದರ್ಶಿ ಕೃಷ್ಣ ಅಂಚನ್, ಶಕ್ತಿ ಸ್ವರೂಪ ಭಜನಾ ಮಂಡಳಿ ಹಾಗೂ ರಾಜೀವ ನಗರ ಫ್ರೆಂಡ್ಸ್ ಸದಸ್ಯ ನಿಖಿಲ್ ಉಪಸ್ಥಿತರಿದ್ದರು. ಉಡುಪಿಯ ಹಲವಾರು ಸಂಘ ಸಂಸ್ಥೆಗಳು ನೀಡಿದ ದಿನ ಬಳಕೆ ವಸ್ತುಗಳನ್ನು ವಿಂಗಡಿಸಿ ಸುಮಾರು 300 ಕಿಟ್ ಗಳನ್ನು ಮಾಡಿ ಅಂಕೋಲಕ್ಕೆ ಪ್ರಯಾಣ ಬೆಳೆಸಿತು.