ಬಿಜೆಪಿ: ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರ ಬೆಂಬಲಿಗರ ಅಸಮಾಧಾನ ಸ್ಫೋಟ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರದ 17 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಬಿಜೆಪಿಯಲ್ಲೇ ಅಸಮಾಧಾನ ಸ್ಫೋಟಗೊಂಡಿದೆ.
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಅತೃಪ್ತ ಶಾಸಕರು ಗೈರಾಗಿದ್ದಾರೆ. ರೇಣುಕಾಚಾರ್ಯ, ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ, ತಿಪ್ಪಾರೆಡ್ಡಿ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ರಾಮದಾಸ್, ಶಿವನಗೌಡ ನಾಯಕ್, ಕೆ.ಜಿ.ಬೋಪಯ್ಯ ಇವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಪಕ್ಷಕ್ಕೆ ನಿಷ್ಠೆಯಿಂದ ಇದ್ದವರು ತಮಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆಯಲ್ಲಿದ್ದರು. ಆದರೆ ಅವರಿಗೆ ಯಾವುದೇ ಸ್ಥಾನ ಸಿಗಲಿಲ್ಲ. ಹೀಗಾಗಿ ಬಿಜೆಪಿಯಲ್ಲಿ ಬಂಡಾಯ ಎದ್ದಿದ್ದು, ಅತೃಪ್ತರು ಸಭೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ.
ಚಿತ್ರದುರ್ಗ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಆಕ್ರೋಶಗೊಂಡ ಅವರ ಬೆಂಬಲಿಗರು ಬೈಕಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದರು. ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಟೈರುಗಳಿಗೆ ಬೆಂಕಿ ಹಚ್ಚಲು ಮುಂದಾದರು. ಪೊಲೀಸರು ಇದನ್ನು ತಡೆಯುತ್ತಿದ್ದಂತೆ ಬೈಕಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿ ಬೀಸಿದರು.ಸಚಿವ ಸ್ಥಾನ ಸಿಗದ ಹಿನ್ನೆಲೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅಸಮಧಾನ ವ್ಯಕ್ತಪಡಿಸಿದ್ದರು. ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಶಾಸಕರ ಗೈರು ಹಾಜರಾಗಿದ್ದರು. ಹಿರಿತನ, ಪಕ್ಷನಿಷ್ಠೆ ಗುರುತಿಸಿ ಮಂತ್ರಿಗಿರಿ ನೀಡದ್ದಕ್ಕೆ ಬೇಸರವಾಗಿದೆ. ಭ್ರಮನಿರಸನ ಆಗಿದೆ. ಕೆಲ ಶಾಸಕರು ಇಂದು ಬೆಂಗಳೂರಿನಲ್ಲಿ ಸೇರಿ ಚರ್ಚಿಸುತ್ತೇವೆ. ಬಿಎಸ್ ವೈ ಮತ್ತು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುತ್ತೇವೆ’ ಎಂದು ಮಾಧ್ಯಮದ ಎದುರು ತಿಪ್ಪಾರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ. ಚಿತ್ರದುರ್ಗದ ಸರ್ಕಲ್‍ನಲ್ಲಿ ಶಾಸಕ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ತಪ್ಪಿದೆ ಹಿನ್ನೆಲೆಯಲ್ಲಿ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರು, ನಗರಸಭೆ ಸದಸ್ಯರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ನಡು ರಸ್ತೆಯಲ್ಲಿ ಸ್ಕೂಟಿಗೆ ಬೆಂಕಿ ಹಚ್ಚಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!