ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮ ಪಿ.ಸಾಲ್ಯಾನ್ ನಿಧನ
ಬಂಟ್ವಾಳ ತಾಲೂಕಿನ ಉಳಿ, ಕಕ್ಯಪದವು ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪದವೀಧರ ಮುಖ್ಯ ಶಿಕ್ಷಕ ರಾಮ ಪಿ.ಸಾಲ್ಯಾನ್ (೫೬)ಅವರು ಬುಧವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಮೃತರು ಶಿಕ್ಷಕಿ, ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಅವರು ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ, ಕೊಯ್ಯೂರು, ನಾಳ ಸಹಿತ ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಶಿಕ್ಷಣ ಕ್ಷೇತ್ರದಲ್ಲಿನ ಅವರ ಗಮನಾರ್ಹ ಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿತ್ತು. ಉತ್ತಮ ಚಿತ್ರಕಾರರಾಗಿದ್ದ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಪ್ರೋತ್ಸಾಹ ನೀಡುತ್ತಿದ್ದರು. ಶಿಕ್ಷಕರ ದಿನಾಚರಣೆಗಾಗಿ ನಡೆಯುವ ಸಾಂಸ್ಕೃತಿಕ ಮತ್ತಿತರ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆಯುತ್ತಿದ್ದರು. ಕಬಡ್ಡಿ ರಾಜ್ಯ ಮಟ್ಟದ ತೀರ್ಪುಗಾರರಾಗಿದ್ದರು. ಕಂಬಳ ಪ್ರೇಮಿಯಾಗಿದ್ದ ಅವರು ಸ್ವತ: ಓಟದ ಕೋಣಗಳನ್ನು ಹೊಂದಿದ್ದರು. ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ಸದಸ್ಯರಾಗಿದ್ದರು. ತಾಂಬೂಲ ಕಲಾವಿದರು ನಾಟಕ ತಂಡದ ಗೌರವ ಸಲಹೆಗಾರ,ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಮಟ್ಟದ ತರಬೇತಿದಾರ, ಪುಂಜಾಲಕಟ್ಟೆ-ಮಡಂತ್ಯಾರು ಲಯನ್ಸ್ ಕ್ಲಬ್ನ ಸದಸ್ಯರಾಗಿದ್ದರು.
ಬಸವರತ್ನ ಪ್ರಶಸ್ತಿ, ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ, ಸೌರಭ ರತ್ನ ರಾಜ್ಯ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ, ಸಮ್ಮಾನಗಳು ಅವರಿಗೆ ಲಭಿಸಿದ್ದವು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಜಿ.ಪಂ.ಸದಸ್ಯರಾದ ಎಂ. ತುಂಗಪ್ಪ ಬಂಗೇರ, ಬಿ.ಪದ್ಮಶೇಖರ ಜೈನ್, ಕಕ್ಯಪದವು ಗರಡಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ರಮೇಶ್ ನಾಯಕ್ ರಾಯಿ, ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಅಧ್ಯಕ್ಷ ಬೇಬಿ ಕುಂದರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಎಸ್ಸಿ ಎಸ್ಟಿ ಸಂಘದ ಜಿಲ್ಲಾಧ್ಯಕ್ಷ ಆಂಜನೇಯ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ , ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ಮೋನಪ್ಪ ಕೆ., ಯುವಜನ ಕ್ರೀಡೆ ಸಬಲೀಕರಣ ಅಧಿಕಾರಿ ನವೀನ್ ಪಿ.ಎಸ್., ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತಿತರರು ಮೃತರ ಅಂತಿಮ ದರ್ಶನ ಪಡೆದರು.
ಮೃತರ ಶೋಕಾರ್ಥ ಶಾಲೆಗೆ ರಜೆ ಸಾರಲಾಗಿತ್ತು.