ನೇತ್ರದಾನ ಮಾಡಿ – ಜೀವನವನ್ನು ಬೆಳಗಿಸಿ:ಜಾಗೃತಿ ನಡಿಗೆ 2019


ಮಣಿಪಾಲ : ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ಇಲಾಖೆ -ಅಂಧತ್ವ ನಿವಾರಣಾ ವಿಭಾಗ, ಉಡುಪಿ ಜಿಲ್ಲೆ ಮತ್ತು ಸೈಟ್ ಲೈಫ್ ಇಂಟರ್‌ನ್ಯಾಷನಲ್ ಇವರು ಜಂಟಿಯಾಗಿ ನೇತ್ರದಾನ ಪಾಕ್ಷಿಕದ ಅಂಗವಾಗಿ 28ನೇ ಆಗಸ್ಟ್ 2019ರ ಬುಧವಾರದಂದು ಜಾಗೃತಿ ನಡಿಗೆ ಆಯೋಜಿಸಿತ್ತು. ಇದಕ್ಕೆ ಮಾಹೆ ಮಣಿಪಾಲದ ಸಹ ಉಪಕುಲಪತಿಗಳಾದ ಡಾ. ಪೂರ್ಣಿಮಾ ಬಾಳಿಗಾ, ಉಡುಪಿ ಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀ ಮಂಜುನಾಥ್, ಮಾಹೆ ಮಣಿಪಾಲದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿಗಳ ನಿರ್ದೇಶಕಿ ಶ್ರೀಮತಿ ಗೀತಾ ಮಯ್ಯರವರು ಜಂಟಿಯಾಗಿ ಹಸಿರು ನಿಶಾನೆ ತೋರಿದರು.


ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಸಿ ಜಿ ಮುತ್ತಣ, ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ, ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಪದ್ಮರಾಜ ಹೆಗ್ಡೆ, ನೇತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುಲತಾ ಭಂಡಾರಿ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಸುರೇಂದ್ರ ಚಿಂಬಾಳ್ಕರ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಜಾಗೃತಿ ನಡಿಗೆ ಕಲ್ಸಂಕದಿಂದ ಪ್ರಾರಂಭವಾಗಿ ಬೋರ್ಡ್ ಹೈಸ್ಕೂಲಿನಲ್ಲಿ ಕೊನೆಗೊಂಡಿತು. ನೇತ್ರದಾನ ಜಾಗೃತಿಯ ಬಗ್ಗೆ ಬೀದಿ ನಾಟಕವನ್ನು ಮಣಿಪಾಲ ನರ್ಸಿಂಗ್ ವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸುಮಾರು 250 ವೈದ್ಯರು, ದಾದಿಯರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.
ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಪ್ರತಿವರ್ಷ ಆಗಸ್ಟ್ 25ರಿಂದ ಸೆಪ್ಟೆಂಬರ್ 8ರವರೆಗೆ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ನಡೆಸಲಾಗುತ್ತದೆ. ಪಾರಪಟಲ(ಕಾರ್ನಿಯಾ)ದ ಕುರುಡುತನ ಇರುವವರಿಗೆ ನೇತ್ರದಾನ ಮಾಡಲು ಅಥವಾ ಪ್ರತಿಜ್ಞೆ ಮಾಡಲು ಸಂದೇಶವು ಹೊರಬಂದಂತೆ ಜಾಗೃತಿ ಮೂಡಿಸುವ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಯಿತು.


ವರದಿಯ ಪ್ರಕಾರ, ವಿಶ್ವದ ಪ್ರತಿ ಐದು ಅಂಧ ಜನರಲ್ಲಿ ಒಬ್ಬರು ಭಾರತದವರು. ಅಂದರೆ ಕನಿಷ್ಠ 46 ಲಕ್ಷ ಭಾರತೀಯರು ಪಾರಪಟಲದ ಕುರುಡುತನದಿಂದ ಬಳಲುತ್ತಿದ್ದಾರೆ. ಆದರೆ ನೇತ್ರದಾನದ ಪ್ರಮಾಣವು ಕೇವಲ 35,000 ಮಾತ್ರ, ಅದು ತುಂಬಾ ಕಡಿಮೆ. ಆದ್ದರಿಂದ ಪಾರಪಟಲ (ಕಾರ್ನಿಯಾ) ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಮುಗಿಸಲು ಯುವಕರು ಮತ್ತು ಹಿರಿಯರು ಸೇರಿದಂತೆ ಸಮಾಜದ ಜನರಿಗೆ ಶಿಕ್ಷಣ ನೀಡುವುದು ಬಹಳ ಅವಶ್ಯಕವಾಗಿದೆ.

Leave a Reply

Your email address will not be published. Required fields are marked *

error: Content is protected !!