ಪೊಲೀಸ್ ಸಿಬ್ಬಂದಿ ವೇತನ ಪರಿಷ್ಕರಣೆಗೆ ತಡೆ
ಬೆಂಗಳೂರು: ಪೊಲೀಸ್ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಇತ್ತೀಚೆಗಷ್ಟೇ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಹೊರಡಿಸಿದ್ದ ಸುತ್ತೋಲೆ ಜಾರಿಗೆ ತಾತ್ಕಾಲಿಕ ತಡೆ .
ವೇತನ ಪರಿಷ್ಕರಣೆ ಕುರಿತು ಹಣಕಾಸು ಇಲಾಖೆ ಪರಿಶೀಲಿಸಿ ಹಸಿರು ನಿಶಾನೆ ತೋರುವವರೆಗೂ ಸುತ್ತೋಲೆಗೆ ತಡೆ ನೀಡಲಾಗಿದೆ. ಪೊಲೀಸರ ವೇತನ ನಿಗದಿಪಡಿಸುವಲ್ಲಿ ಕೆಲವೊಂದು ವ್ಯತ್ಯಾಸಗಳಾಗಿರುವ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಪರಿಶೀಲಿಸಲಿದೆ ಎಂದು ತಿಳಿದು ಬಂದಿದೆ .
ಈ ಸಂಬಂಧ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಮಂಗಳವಾರ ತುರ್ತು ಸಂದೇಶ ರವಾನಿಸಿರುವ ಆಡಳಿತ ವಿಭಾಗದ ಎಡಿಜಿಪಿ ಎಂ.ಎಂ. ಸಲೀಂ, ‘ಪೊಲೀಸ್ ಅಧಿಕಾರಿ/ಸಿಬ್ಬಂದಿ ವೇತನವನ್ನು ಪರಿಷ್ಕರಿಸಿ ಹೊಸ ವೇತನ ನಿಗದಿಪಡಿಸಲಾಗಿತ್ತು. ಸರ್ಕಾರ/ ಪ್ರಧಾನ ಕಚೇರಿಯಿಂದ ಆದೇಶ ನೀಡುವವರೆಗೂ ಹೊಸ ವೇತನಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬಾರದು’ ಎಂದು ಸೂಚಿಸಿದ್ದಾರೆ.
ಆದರೆ, ಈ ವಾರದೊಳಗೆ ಹಣಕಾಸು ಇಲಾಖೆ ವೇತನ ಪರಿಷ್ಕರಣೆ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಲಿದೆ. ಹೊಸ ವೇತನ ಆಗಸ್ಟ್ 1ರಿಂದಲೇ ಜಾರಿಯಾಗಲಿದೆ. ಈ ಬಗ್ಗೆ ಪೊಲೀಸರಲ್ಲಿ ಆತಂಕ ಬೇಡ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.