ಶೆಟ್ಟರ್‌ ಕಾರಿಗೆ ಅಡ್ಡಲಾಗಿ ಮಲಗಿದ ರೈತ ಮುಖಂಡ ಪ್ರಕಾಶ್ ನಾಯಕ್

ಬೆಳಗಾವಿ: ‘ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ಕುರಿತು ಇಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ತೆರಳುತ್ತಿದ್ದ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹಾನಿಗೆ ಒಳಗಾಗಿರುವ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಸಂತ್ರಸ್ತರಿಗೆ ನೆರವಾಗಲು ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು’ ಎಂದು ಮುಖಂಡರು ಆಗ್ರಹಿಸಿದರು. ಆದರೆ, ಇದಕ್ಕೆ ಸಚಿವರು ಸ್ಪಂದಿಸಲಿಲ್ಲ. ಹೀಗಾಗಿ, ಮುಖಂಡರು ಸಭಾಂಗಣದಲ್ಲಿ ‘ಸರ್ಕಾರಕ್ಕೆ ಶೇಮ್‌… ಶೇಮ್‌…’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ಬಳಿಕ ಸಚಿವರು ತೆರಳುತ್ತಿದ್ದಾಗ ಮುಖಂಡ ಪ್ರಕಾಶ್ ನಾಯಕ್‌ ಕಾರ್‌ಗೆ ಅಡ್ಡಲಾಗಿ ಮಲಗಿದರು. ಪೊಲೀಸರು ಮಧ್ಯಪ್ರವೇಶಿಸಿ ವಾಹನಗಳಿಗೆ ದಾರಿ ಮಾಡಿಕೊಟ್ಟರು.

‘ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಚಿವರಿಗೆ ಮುತ್ತಿಗೆ ಹಾಕಲು ಬರುತ್ತಿದ್ದ ನನ್ನನ್ನು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳು ತಡೆದು ಎಳೆದಾಡಿದರು. ಸೀರೆಯನ್ನು ಹರಿದು ದೌರ್ಜನ್ಯ ಎಸಗಿದರು’ ಎಂದು ಜಯಶ್ರೀ ಗುರಣ್ಣವರ ಮಾಧ್ಯಮದವರು ಎದುರು ಕಣ್ಣೀರು ಹಾಕಿದರು.

ಬೆಳಗಾವಿಯಲ್ಲೇ ಅಧಿವೇಶನ ನಡೆಸಿ: ‘ಪ್ರವಾಹದ ಕಾರಣ ನೀಡಿ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಸಬೇಕು. ಸಂತ್ರಸ್ತರಿಗೆ ತಲುಪಿರುವ ಪರಿಹಾರ, ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಶಾಶ್ವತ ಪುನರ್ವಸತಿ ಕುರಿತು ಅಧಿವೇಶನದಲ್ಲಿ ಚರ್ಚಿಸಬೇಕು. ಇಲ್ಲಿ ಅಧಿವೇಶನ ನಡೆಸಿದರೆ ಮಂತ್ರಿಗಳು ಪ್ರವಾಹಬಾಧಿತ ಸ್ಥಳಗಳಿಗೆ ತೆರಳಿ ವಾಸ್ತವ ಅರಿಯಬಹುದು’ ಎಂದು ಮುಖಂಡ ಸಿದಗೌಡ ಮೋದಗಿ ಒತ್ತಾಯಿಸಿದರು.

ಸಭೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದರು. ಅವರನ್ನು ಪೊಲೀಸರು ತಡೆದರು. ಆಗ ಮಾತಿನ ಚಕಮಕಿ ನಡೆಯಿತು.

Leave a Reply

Your email address will not be published. Required fields are marked *

error: Content is protected !!