ಶ್ರೀಕೃಷ್ಣಮಠ ಲಕ್ಷದೀಪೋತ್ಸವ ಕಣ್ತುಂಬಿಕೊಂಡ ಭಕ್ತರು
ಉಡುಪಿ: ಉತ್ಥಾನ ದ್ವಾದಶಿಯ ದಿನವಾದ ಶನಿವಾರದಿಂದ ಉಡುಪಿಯ ಶ್ರೀಕೃಷ್ಣಮಠದಲ್ಲಿ ಲಕ್ಷದೀಪೋತ್ಸವ ಪ್ರಾರಂಭವಾಯಿತು. ರಥಬೀದಿಯ ಸುತ್ತಲೂ ಸಾಲುಸಾಲು ದೀಪಗಳ ಹಣತೆಯನ್ನು ಶ್ರೀಕೃಷ್ಣನ ಭಕ್ತರು ಉರಿಸಿದರು. ಸಾವಿರಾರು ಭಕ್ತರು ತೆಪ್ಪೋತ್ಸವ, ದೀಪೋತ್ಸವವನ್ನು ಕಣ್ತುಂಬಿಕೊಂಡು ಕೃಷ್ಣನ ದರ್ಶನ ಪಡೆದು ಪುನೀತರಾದರು.
ಕೃಷ್ಣಮಠದಲ್ಲಿ ಬೆಳಿಗ್ಗೆ ಪರ್ಯಾಯ ಪಲಿಮಾರು ಶ್ರೀಗಳು ತುಳಸಿ ಪೂಜೆ ನೆರವೇರಿಸಿದರು. ಕೃಷ್ಣ ದೇವರಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಮಧ್ಯಾಹ್ನ ಕೃಷ್ಣ ಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿಯ ಅಂಗವಾಗಿ ಪರ್ಯಾಯ ಪಲಿಮಾರು ಶ್ರೀಗಳು, ಭೀಮನಕಟ್ಟೆ ಮಠದ ರಘುವರೇಂದ್ರ ತೀರ್ಥರು, ಪಲಿಮಾರು ಕಿರಿಯ ಯತಿಗಳು ತುಳಸಿ ಹರಿವಾಣವನ್ನು ತಲೆಯ ಮೇಲಿಟ್ಟು ಡಂಗುರಾವ ಸಾರಿ ಹರಿಯ ದಾಸರ ಪದಕ್ಕೆ ನೃತ್ಯ ಮಾಡಿದರು.
ತುಳಸಿ ಪೂಜೆ, ಸಂಕೀರ್ತನೆಯ ಬಳಿಕ ಸೂರ್ಯವಾದ್ಯ, ನಾದಸ್ವರ, ಸಂಗೀತ, ಭಾಗವತ ಪುರಾಣಗಳು ಚಂದ್ರಶಾಲೆಯಲ್ಲಿ ನಡೆಯಿತು. ಬಳಿಕ ದೇವರಿಗೆ ಮಂಗಳಾರತಿ ಮಾಡಿ ತುಳಸಿ ಹರಿವಾಣವನ್ನು ತಲೆಯಲಿಟ್ಟು ನೃತ್ಯ ನಡೆಸಿ ಪ್ರದಕ್ಷಿಣೆ ಮಾಡಿದರು.
ಕ್ಷೀರಾಬ್ದಿ ಅರ್ಘ್ಯ ಪ್ರಧಾನ: ಕೃಷ್ಣಮಠದ ಮಧ್ವ ಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಸಂಜೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು, ಪೇಜಾವರ ಮಠದ ವಿಶ್ವೇಶತೀರ್ಥರು, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು, ಅದಮಾರು ಮಠದ ವಿಶ್ವಪ್ರಿಯ ತೀರ್ಥರು, ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನತೀರ್ಥರು, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು, ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥರು ಪೂಜೆ ಸಲ್ಲಿಸಿ ಕ್ಷೀರಾಬ್ದಿ ಅರ್ಘ್ಯ ನೀಡಿದರು.
ಈ ಸಂದರ್ಭ ಮಧ್ವ ಸರೋವರದ ದಂಡೆಯ ಮೇಲೆ ಪ್ರಭೋದೋತ್ಸವ ನಡೆಯಿತು. ವೇದ- ದಾಸಗಾನ ಸಮರ್ಪಣೆಯೊಂದಿಗೆ ಕರಾವಳಿಯ ಭಜನಾ ಮಂಡಳಿಗಳಿಂದ ಗೋಷ್ಠಿ ಗಾನ ನಡೆಯಿತು.
ರಾತ್ರಿ ಲಕ್ಷದೀಪೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. . ಉತ್ಸವದಲ್ಲಿ ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥರು, ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥ ಶ್ರೀಪಾದರು,ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥರು,ಪೇಜಾವರ ಕಿರಿಯ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.