ಡೆಂಗ್ಯೂ ಮೂವರ ಬಲಿ : ವರದಿ ಮಾಡಲು ಹೋದ ಪತ್ರಕರ್ತರಿಗೂ ತಟ್ಟಿದ ಮಾಹಾ ಮಾರಿ ರೋಗ
ಮಂಗಳೂರು ಜುಲೈ 24: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ರೌದ್ರಾವತಾರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜಿಲ್ಲೆಯಲ್ಲಿ ಈಗಾಗಲೇ ಈ ಮಹಾಮಾರಿಗೆ 3 ಜನ ಬಲಿಯಾಗಿದ್ದು, ಇನ್ನೂ ಹಲವಾರು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಡೆಂಗ್ಯೂ ಜ್ವರದ ಬಗ್ಗೆ ವರದಿ ಮಾಡುವ ಪತ್ರಕರ್ತರಿಗೂ ಈ ಬಾರಿ ಡೆಂಗ್ಯೂ ಜ್ವರ ಭಾದಿಸಿದೆ. ಅದರಲ್ಲೂ ಬಿಟಿವಿ ಕ್ಯಾಮರಾಮೆನ್ ನಾಗೇಶ್ ಪಡು ಭಾನುವಾರ ಡೆಂಗ್ಯೂ ಜ್ವರಕ್ಕೆ ಬಲಿಯಾದ ಬೆನ್ನಲ್ಲೇ ಜಿಲ್ಲೆಯ ಮತ್ತಷ್ಟು ಪತ್ರಕರ್ತರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ.
ವಿಶ್ವವಾಣಿ ಪತ್ರಿಕೆಯ ಮಂಗಳೂರು ಬ್ಯುರೋ ಮುಖ್ಯಸ್ಥ ಜಿತೇಂದ್ರ ಕುಂದೇಶ್ವರ, ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ. ಟಿವಿ 5 ಕ್ಯಾಮರಾಮೆನ್ ಮಿಥುನ್ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಿಗ್ವಿಜಯ ವಾಹಿನಿಯ ಜಿಲ್ಲಾ ವರದಿಗಾರ ಕಿಶನ್ ಶೆಟ್ಟಿ ಹಾಗೂ ನ್ಯೂಸ್ 18 ಕನ್ನಡ ವಾಹಿನಿಯ ಕ್ಯಾಮರಾಮೆನ್ ನಿಖಿಲ್ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಿವಿ9 ವಾಹಿನಿಯ ಕ್ಯಾಮರಾಮೆನ್ ಅಶೋಕ್, ಬಿಟಿವಿ ವರದಿಗಾರ ಶರತ್ ಕುಮಾರ್, ಕನ್ನಡಪ್ರಭ ಪತ್ರಿಕೆಯ ಉಪಸಂಪಾದಕ ಧೀರಜ್, ವಾರ್ತಾಭಾರತಿ ಪತ್ರಿಕೆ ವೆಬ್ ಸೈಟ್ ಕ್ಯಾಮರಾಮೆನ್ ಆಜಾದ್ ಖಂಡಿಗೆ ಡೆಂಗ್ಯೂ ಜ್ವರದ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.