ರಾಜಸ್ಥಾನಕ್ಕೆ ಸೋಲಿನ ಪಂಚ್:

ಜೈಪುರ: ಅಜಿಂಕ್ಯ ರಹಾನೆ ಅಜೇಯ 105 ರನ್‌ ಸಾಹಸದ ಹೊರತಾಗಿಯೂ ಡೆಲ್ಲಿ ಎದುರಿನ ತವರಿನ ಪಂದ್ಯದಲ್ಲಿ ರಾಜಸ್ಥಾನ್‌ 6 ವಿಕೆಟ್‌ಗಳ ಸೋಲನುಭವಿಸಿದೆ.

ರಾಜಸ್ಥಾನ್‌ 6 ವಿಕೆಟಿಗೆ 191 ರನ್‌ ಒಟ್ಟು ಗೂಡಿಸಿದರೆ, ಡೆಲ್ಲಿ 4ವಿಕೆಟಿಗೆ 193 ರನ್‌ ಗಳಿಸಿ ಜಯಭೇರಿ ಬಾರಿಸಿತು. ಧವನ್‌, ಶಾ, ಪಂತ್‌ ಅವರು ಡೆಲ್ಲಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂತ್‌ ಕೇವಲ 36 ಎಸೆತಗಳಿಂದ 78 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಸಂಜು ಸ್ಯಾಮ್ಸನ್‌ ಸೊನ್ನೆಗೆ ರನೌಟಾದ ಬಳಿಕ ಕ್ರೀಸ್‌ ಆಕ್ರಮಿಸಿಕೊಂಡ ರಹಾನೆ 63 ಎಸೆತಗಳಿಂದ 105 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಇದು ಐಪಿಎಲ್‌ನಲ್ಲಿ ರಹಾನೆ ಬಾರಿಸಿದ 2ನೇ ಶತಕವಾದರೆ, ರಾಜಸ್ಥಾನ್‌ ಪರ ದಾಖಲಾದ ಸರ್ವಾಧಿಕ ವೈಯಕ್ತಿಕ ಗಳಿಕೆ. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಅವರು 11 ಬೌಂಡರಿ, 3 ಸಿಕ್ಸರ್‌ ಸಿಡಿಸಿ ತವರಿನ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು.

ನಾಯಕ ಸ್ಟೀವನ್‌ ಸ್ಮಿತ್‌ 50 ರನ್‌ ಹೊಡೆದರು (32 ಎಸೆತ, 8 ಬೌಂಡರಿ). ಇದು ಐಪಿಎಲ್‌ನಲ್ಲಿ ಸ್ಮಿತ್‌ ದಾಖಲಿಸಿದ 8ನೇ ಅರ್ಧ ಶತಕ. ರಹಾನೆ-ಸ್ಮಿತ್‌ 130 ರನ್‌ ಜತೆಯಾಟ ನಿಭಾಯಿಸಿದರು. ಇದು 2ನೇ ವಿಕೆಟಿಗೆ ರಾಜಸ್ಥಾನ್‌ ಪೇರಿಸಿದ ಅತ್ಯಧಿಕ ರನ್‌ ಆಗಿದೆ.

ಹ್ಯಾಟ್ರಿಕ್‌ ಗೋಲ್ಡನ್‌ ಡಕ್‌!
ಒಂದೆಡೆ ರಹಾನೆ ಶತಕ ಬಾರಿಸಿ ಸಂಭ್ರಮಿಸಿದರೆ, ಇನ್ನೊಂದೆಡೆ ಆ್ಯಶನ್‌ ಟರ್ನರ್‌ ಸತತ 3ನೇ ಸೊನ್ನೆ ಸುತ್ತಿದ ಅವಮಾನಕ್ಕೆ ಸಿಲುಕಿದರು. ಅವರನ್ನು ಇಶಾಂತ್‌ ಮೊದಲ ಎಸೆತದಲ್ಲೇ ಔಟ್‌ ಮಾಡಿದರು. ಇದರೊಂದಿಗೆ ಟರ್ನರ್‌ ಐಪಿಎಲ್‌ನ “ಗೋಲ್ಡನ್‌ ಡಕ್‌ ಹ್ಯಾಟ್ರಿಕ್‌’ ದಾಖಲೆ ಬರೆದರು. ಟರ್ನರ್‌ ಐಪಿಎಲ್‌ನಲ್ಲಿ ಸತತ 3 ಸೊನ್ನೆ ಸುತ್ತಿದ 6ನೇ ಆಟಗಾರ.
ಡೆಲ್ಲಿ ಪರ ಕಾಗಿಸೊ ರಬಾಡ 37 ರನ್ನಿಗೆ 2 ವಿಕೆಟ್‌ ಕಿತ್ತರು. ಈ ಎರಡೂ ವಿಕೆಟ್‌ಗಳನ್ನು ಅವರು ಅಂತಿಮ ಓವರಿನಲ್ಲಿ ಉರುಳಿಸಿದರು.

Leave a Reply

Your email address will not be published. Required fields are marked *

error: Content is protected !!