ಋಣಮುಕ್ತ ಕಾಯ್ದೆಯ : ಜೆಡಿಎಸ್ ವಿರುದ್ಧ ‘ಕೈ’ ಗರಂ
ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ಕೈಗೊಂಡ ಕರ್ನಾಟಕ ಋಣ ಪರಿಹಾರ ಕಾಯ್ದೆ 2018ರ ನಿರ್ಧಾರ ಬರೀ ಜೆಡಿಎಸ್‍ಗೆ ಸೇರಬೇಕಾ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ.
14 ತಿಂಗಳು ಆಡಳಿತ ನಡೆಸಿದರೂ ಕಾಂಗ್ರೆಸ್ಸಿಗೆ ಯಾವುದೇ ಕ್ರೆಡಿಟ್ ಸೇರಲ್ವಾ? ಸರ್ಕಾರ ಬಿದ್ದ ನಾಲ್ಕೇ ದಿನಕ್ಕೆ ಕಾಂಗ್ರೆಸ್ಸನ್ನು ಜೆಡಿಎಸ್ ಮರೆತು ಬಿಟ್ಟಿತಾ ಎಂಬ ಪ್ರಶ್ನೆಗಳು ಎದ್ದಿವೆ. ಇಂತಹ ಪ್ರಶ್ನೆಗಳಿ ಎದ್ದೇಳಲು ಮುಖ್ಯ ಕಾರಣ ಇಂದಿನ ದಿನ ಪತ್ರಿಕೆಯಲ್ಲಿ ಕಡುಬಡವರಿಗೆ ಜಾರಿಗೆ ತಂದ ಋಣಮುಕ್ತ ಕಾಯ್ದೆಯ ಜಾಹೀರಾತು.
ಋಣಮುಕ್ತ ಕಾಯ್ದೆಯ ಜಾಹೀರಾತಿನಲ್ಲಿ ಗಾಂಧೀಜಿ, ಜೆಡಿಎಸ್ ಪಕ್ಷದ ಚಿಹ್ನೆ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಫೋಟೋ ಮಾತ್ರ ಹಾಕಲಾಗಿದೆ. ಎಲ್ಲಿಯೂ ಮೈತ್ರಿ ಪಕ್ಷ ಕಾಂಗ್ರೆಸ್‍ನ ಚಿಹ್ನೆ, ನಾಯಕರ ಹೆಸರನ್ನು ಜಾಹೀರಾತಿನಲ್ಲಿ ಪ್ರಸ್ತಾಪಿಸಿಲ್ಲ. ಹೀಗಾಗಿ ಕಾಂಗ್ರೆಸ್ ವಲಯದಲ್ಲಿ ಜೆಡಿಎಸ್ ಹಾಗೂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಎದ್ದಿದೆ.
ಋಣಮುಕ್ತ ಕಾಯ್ದೆಯ ನಿರ್ಧಾರವು ಏಕಪಕ್ಷೀಯ ಎಂಬಂತೆ ಬಿಂಬಿಸಿರುವುದು ಖಂಡನೀಯ. ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ಪಾತ್ರವನ್ನೇ ಮರೆತಿದ್ದಾರೆ. ಮೈತ್ರಿ ಸರ್ಕಾರದ ನಿರ್ಧಾರವನ್ನು ಕೇವಲ ಜೆಡಿಎಸ್‍ಗೆ ಸೇರಿದ್ದು ಎಂಬಂತೆ ಜಾಹೀರಾತಿನಲ್ಲಿ ಬಿಂಬಿಸಿದ್ದು ತಪ್ಪು ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು, ಹೀಗೆ ಮಾಡಿದ್ದರೆ ಅದು ತಪ್ಪಾಗುತ್ತದೆ. ಋಣ ಮುಕ್ತ ಕಾನೂನನ್ನು ನಾವು ಸ್ವಾಗತಿಸುತ್ತೇವೆ. ಆದರೆ ಆ ಜಾಹೀರಾತಿನಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಬಿಟ್ಟಿದ್ದು ಸರಿಯಲ್ಲ ಎಂದು ಹೇಳಿದರು.
ಕಾಂಗ್ರೆಸ್ ಬೆಂಬಲದೊಂದಿಗೆ ಋಣ ಮುಕ್ತ ಕಾಯ್ದೆ, ರೈತರ ಸಾಲ ಮನ್ನಾ ಆಗಿರುತ್ತದೆ. ಯಾವುದೇ ಕಾಯ್ದೆಯಾದರೂ ಅದು ಕಾಂಗ್ರೆಸ್ ಬಲದಿಂದಲೇ ಆಗಿರುತ್ತದೆ. ಯಾರಾದರು ಈ ಅಚಾತುರ್ಯ ಮಾಡಿರುತ್ತಾರೆ. ಅವರು ಅದನ್ನು ಸರಿ ಪಡೆಸಿಕೊಳ್ಳಬೇಕು ಎಂದು ಉತ್ತರಿಸಿದರು.