ಕೊರೋನಾದಿಂದ ಶ್ರೀಮಂತರಾದವರು ಯಾರು ಗೊತ್ತೇ…?

(ಎಕ್ಸ್‌ಕ್ಲೂಸಿವ್ ರಿಪೋರ್ಟ್ -ಎಸ್ಸೆನ್ ಕುಂಜಾಲ್)
ಆರೋಗ್ಯ ಇಲಾಖೆಯ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸತೊಡಗಿದರೆ ಅದು ಒಮ್ಮಿಂದೊಮ್ಮೆಗೇ ಮುಗಿಯುವಂಥದ್ದಲ್ಲ. ಶ್ರೀರಾಮುಲು ಮಂತ್ರಿಯಾದ ಮರುಕ್ಷಣದಿಂದಲೇ ಆರೋಗ್ಯ ಇಲಾಖೆ ಮಾರಕ ರೋಗಕ್ಕೆ ತುತ್ತಾಗಿ ಹೋಗಿತ್ತು. ಡಿಸ್ಟ್ರಿಕ್ಟ್ ಸರ್ಜನ್, ಡಿ.ಎಚ್.ಒ, ಜೊಂಟ್ ಡೈರಕ್ಟರ್, ಡೆಪ್ಯೂಟಿ ಡೈರಕ್ಟರ್ ಟ್ರಾನ್ಸ್‌ಫರ್ ಹೆಸರಲ್ಲೇ ಕೋಟ್ಯಂತರ ರೂಪಾಯಿ ಮುಂಡಾಯಿಸಿದ ಶ್ರೀರಾಮುಲು ಇದೀಗ ಕೊರೋನಾ ಎಂಬ ಶಾಪಗ್ರಪ್ತ ವ್ಯಾಧಿಯ ಪರ್ಸನಲ್ ಪ್ರೊಟೆಕ್ಷನ್ ಎಕ್ಯುಪ್ಂಟ್(ಪಿ.ಪಿ.ಇ) ಖರೀದಿಯಲ್ಲಿ ಭಾರೀ ಪರ್ಸಂಟೇಜ್ ಅವ್ಯವಹಾರಕ್ಕೆ ಕೈಯಿಕ್ಕಿದ್ದು ಮಾತ್ರ ಅಕ್ಷಮ್ಯ ಅಪರಾಧ. ಕೇರಳದಲ್ಲಿ ಕೊರೋನಾ ಪೀಡಿತರು ಗುಣಮುಖರಾಗಿ ಮನೆಯತ್ತ ದಾಪುಗಾಲು ಇಡುತ್ತಿದ್ದರೆ, ನಮ್ಮ ರಾಜ್ಯದಲ್ಲಿ ಸರದಿಯಂತೆ ಒಬ್ಬೊಬ್ಬರೇ ಸ್ಮಶಾನದತ್ತ ಸಾಗಿಸಲ್ಪಡುತ್ತಿದ್ದರೆ ಇದಕ್ಕೆ ಪ್ರಮುಖ ಕಾರಣವೇ ಕಳಪೆ ಜೌಷಧ ಮತ್ತಿತರೇ ಖರೀದಿಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ. ಇದೀಗ ಮಂಗಳೂರಿನ ವೆನ್‌ಲಾಕ್ ಹಾಸ್ಪಿಟಲ್‌ನಲ್ಲಿ ಬಂಟ್ವಾಳದ ಮಹಿಳೆ ಕೊರೋನಾಕ್ಕೆ ಬಲಿಯಾಗಲು ಕಾರಣವಾದ ಅಂಶವೂ ಇದುವೇ ಎಂಬುದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸರಕಾರಿ ಆಸ್ಪತ್ರೆಗಳಿಗೆ ಕಳಪೆ ಜೌಷಧಿ ಹಾಗೂ ಪಿಪಿಇ ಕಿಟ್ ಮತ್ತು ಮಾಸ್ಕ್ ಸರಬರಾಜು ಮಾಡಿ ಕೋಟ್ಯಂತರ ರೂಪಾಯಿ ತಿಂದು ಮುಗಿಸಿದ ಭಾರೀ ಹಗರಣವೊಂದನ್ನ ನಿಮ್ಮ ಮುಂದಿಡುತ್ತಿದ್ದೇನೆ; ಇವತ್ತಿನ ಅಂಕಣದಲ್ಲಿ.

ನೀವೆಲ್ಲಾ ನೋಡಿರುತ್ತೀರಾ.. ಹಿಂದಿನ ಅಂಕಣದ ಕೊನೆಯಲ್ಲಿ ‘ನಿರೀಕ್ಷಿಸಿ-ಕೊರೋನಾ ಪೈಸಾ ಕರೋನಾ’ ಎಂಬುದರ ಬಗ್ಗೆ ಮುಂದಿನ ಅಂಕಣದಲ್ಲಿ ನಿಮ್ಮ ಮುಂದಿಡುತ್ತೇನೆ ಅಂತ ಸ್ಪಷ್ಟಾಕ್ಷರದಲ್ಲಿ ಬರೆದಿರುವುದನ್ನ. ಇಂಥದ್ದೊಂದು ಮುನ್ಸೂಚನೆಯನ್ನ, ಸುಳಿವನ್ನ ನೀಡಿದ ನಂತರ ಅಸಂಖ್ಯ ಓದುಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಕೆಲವರಂತೂ ‘ಇಟ್ಸ್ ಇಂಪಾಸಿಬಲ್’ ಅಂತ ಕಾಮೆಂಟ್ ಮಾಡಿದ್ದೂ ಇದೆ. ಹೀಗೆ ರೀಡರ್‍ಸ್ ಹೇಳಲು ಕಾರಣಗಳೂ ಇಲ್ಲದ್ದಿಲ್ಲ. ಜಗತ್ತನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾ ಯಾರನ್ನ ಎಫೆಕ್ಟ್ ಮಾಡುತ್ತೆ? ಯಾರನ್ನ ಬಲಿ ತೆಗೆಯುತ್ತೆ? ಯಾರ ಉಸಿರಿಗೆ ಬಂದು ವಕ್ಕರಿಸುತ್ತೆ? ಎಂಬುದಂತೂ ಊಹನಾತೀತ.

ಸಿಡಿದೇಳಲು ಸಿದ್ದರಾದ ಕೊರೋನಾ ಶಂಕಿತರು

ಇಂಥ ಸಂಧಿಗ್ಧತೆಯಲ್ಲಿ ಸ್ವಂತದ ಬಗ್ಗೆ ಯಾರೂ ಯೋಚಿಸಲಾರರು ಎಂಬ ದೃಢ ವಿಶ್ವಾಸ ಎಲ್ಲರಲ್ಲೂ ಇದ್ದುದಂತೂ ಸುಳ್ಳೇನಲ್ಲ. ಹಾಗಾಗಿಯೇ ಏನೋ ಎಂಬಂತೆ ಬಹುತೇಕ ಜನ ‘ಕೊರೋನಾ ಪೈಸಾ ಕರೋನಾ ಈಸ್ ರಾಂಗ್. ಶ್ರೀರಾಮುಲು ಅಷ್ಟೊಂದು ಕೆಟ್ಟವರಲ್ಲ. ಇಪ್ಪತ್ತು ವರ್ಷದ ರಾಜಕಾರಣದ ಅನುಭವ ಉಳ್ಳವರು ಇಂಥ ನೀಚತನಕ್ಕೆ ಕೈಹಾಕಲಾರರು’ ಅಂತಲೇ ಭ್ರಮೆಯಲ್ಲಿದ್ದರು. ಆದರೆ ನಿಜವಾಗ್ಯೂ ಆದದ್ದೇನು ಎಂಬುದು ಗೊತ್ತಾದರೆ, ಜನ ಯಾವ ರೀತಿ ಸ್ವಾಗತಿಸುತ್ತಾರೆ ಎಂಬುದೇ ಯಾಕ ಪ್ರಶ್ನೆ.

ಕೊರೋನಾ ಹೆಸರನ್ನೇ ‘ಪೈಸಾ ಕರೋನಾ’ ಅಂತ ತರ್ಜುಮೆ ಮಾಡಿದ್ಯಾರು ಗೊತ್ತಾ?

ಒಂದು ಮಾತನ್ನ ನಿಮ್ಮ ಮುಂದೆ ಹೇಳಲೇಬೇಕಾಗಿದೆ. ಅದ್ಯಾವಾಗ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಪರಸ್ಪರ ಮನಸ್ಸು ಮುರಿದುಕೊಂಡರೋ ಆ ಮೊಮೆಂಟಲ್ಲೇ ಕೊರೋನಾ ಹೆಸರಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಬರುವ ನಿಧಿಯ ಮೇಲಿನ ನುಂಗುವಿಕೆಯ ಕದನ ಇದಾಗಿದೆ ಎಂಬುದು ಗೊತ್ತಾಗಿಯೇಬಿಟ್ಟಿತ್ತು. ಹಾಗಾಗಿಯೇ ಕೊರೋನಾ ದುಡ್ಡಿನಲ್ಲಿ ಭಯಾನಕ ಹಗರಣ ಬಯಲಿಗಳೆಯುತ್ತೇನೆ ಎಂಬುದಾಗಿ ಸ್ಪಷ್ಟವಾಗಿ ಹೇಳಿದ್ದೆ. ಇಲ್ಲಿ ಗಮನಿಸತಕ್ಕ ಸಂಗತಿಯೆಂದರೆ, ಡಾ. ಸುಧಾಕರ ಅದೇನಿದ್ದರೂ ಕೊರೋನಾದಲ್ಲಿ ಭ್ರಷ್ಟಾಚಾರ ಮಾಡುವಂಥ ಕೀಳು ಮನೋಭಾವನೆಯವರಂತೂ ಅಲ್ಲವೇ ಅಲ್ಲ. ಕೊರೋನಾ ಟೈಮಲ್ಲಿ ಫ್ಯಾಮಿಲಿ ಜತೆ ಸ್ವಿಮ್ಮಿಂಗ್ ಪೂಲಲ್ಲಿ ಮಜಾ ಉಡಾಯಿಸಿದೊಂದನ್ನ ಬಿಟ್ಟರೆ ಇತರೇ ಗಂಭೀರ ಆರೋಪಗಳು ಸುಧಾಕರ ಮೇಲೆ ಇದ್ದಂತಿಲ್ಲ.

ರೆಡ್ ಶರ್ಟ್‌ಧಾರಿ ಮಹಾನ್ ದರೋಡೆಕೋರ ತಿಮ್ಮಪ್ಪ ಯಾರಿವನು?

ಹಾಗಂತ ರಾಮುಲು ಅಪ್ಪಟ್ಟ ಬಕಪಕ್ಷಿ. ಸಿಕ್ಕರೆ ಎಲ್ಲವನ್ನು ನುಂಗುವ ರಣಹದ್ದು. ಒಂದೇ ಏಟಿಗೆ ಲೀಲಾಜಾಲವಾಗಿ ಹೆಣೆಯಬಲ್ಲ. ಈತ ಹಡಗನ್ನೇ ನುಂಗುವ ಜಾದುಗಾರ. ಈತನ ಕಬಳಿಕೆಯ ಬಗ್ಗೆ ನೂರಾರು ಸಾಕ್ಷ್ಯಾಧಾರಗಳು ಸರಕಾರಿ ಹಾಸ್ಪಿಟಲ್ಲುಗಳಲ್ಲಿ ಕಾಣಸಿಗುತ್ತವೆ. ಯಾವುದೇ ಸರಕಾರಿ ಹಾಸ್ಪಿಟಲ್‌ಗೆ ಕಾಲಿಟ್ಟು ನೋಡಿ; ಅಲ್ಲಿ ಘನಂದಾರಿ ಹಣದ ಹೊಳೆ ಹರಿವು ಬರುವ ಬಹುತೇಕ ಪೋಸ್ಟುಗಳು ಡೀಲ್ ಮಾಸ್ಟರ್‌ಗಳಿಗೇ ಫಿಕ್ಸ್. ಇವೆಲ್ಲವೂ ‘ಪೇಯ್ಡ್’ ಪೋಸ್ಟಿಂಗ್‌ಗಳು ಎಂಬುದರಲ್ಲಿ ಸಂದೇಹಗಳೇ ಇಲ್ಲ. ಇದರಲ್ಲಿ ಕೇಳಿ ಬರುವ ಪ್ರಮುಖ ಹೆಸರೇ ಶ್ರೀರಾಮುಲು ಸಂಬಂಧಿ ತಿಮ್ಮಪ್ಪ. ಈ ದುರುಳನ ಫೋಟೋವನ್ನ ಸೆರೆಹಿಡಿದಿರುವುದೇ ನಮ್ಮ ತನಿಖಾ ವರದಿಗೆ ಸಿಕ್ಕ ಪ್ರಾಥಮಿಕ ಜಯ.

ಮಾಸ್ಕ್, ಪೊಟೆಕ್ಷನ್ ಕಿಟ್ ಎಲ್ಲವೂ ಡುಪ್ಲಿಕೇಟ್! ಬ್ರಾಂಡೆಡ್ ಅಲ್ಲವೇ ಅಲ್ಲ!

ಇವೆಲ್ಲವನ್ನ ಬಿಟ್ಟುಬಿಡಿ; ಕೊರೋನಾ ಪೇಷಂಟುಗಳಿಗೆ ಟ್ರೀಟ್‌ಮೆಂಟ್ ನೀಡುವ ಡಾಕ್ಟರ್‍ಸ್, ಫಾರ್ಮಸಿ ಆಪೀಸರ್‍ಸ್, ನರ್ಸಸ್, ಲ್ಯಾಬ್ ಟೆಕ್ನಿಶಯನ್ಸ್, ಆಯಾಗಳು, ವಾರ್ಡ್ ಬಾಯ್‌ಗಳು ರಕ್ಷಾ ಕವಚವಾಗಿ ಧರಿಸಬೇಕಾದ ಪಿಪಿಇ ಗಳನ್ನ ಒಂದಕ್ಕೆ ನಾಲ್ಕು ಪಟ್ಟಿನಷ್ಟು ರೇಟು ಫಿಕ್ಸ್ ಮಾಡಿ ಪರ್ಚೇಸು ಮಾಡಿರುವುದೇ ಬೃಹತ್ ಹಗರಣವಾಗಿದೆ. ಇವೆಲ್ಲವೂ ನಕಲಿ ಸರಕುಗಳು. ಬ್ರಾಂಡೆಡ್ ಅಂತೂ ಅಲ್ಲವೇ ಅಲ್ಲ.

ಮೋದೀಜಿ ಫಿಫ್ಟಿ ಪರ್ಸಂಟ್ ಲಂಚದ ಬಗ್ಗೆ ನಿಮ್ಗೊತ್ತಿಲ್ವಾ?

ನೀವು ನಂಬಲಾರರಿ; ಈ ಹಾಸ್ಪಿಟಲುಗಳ ಆಪರೇಷನ್ ಥೇಟರುಗಳಲ್ಲಿ ‘ಯೂಸ್ ಆಂಡ್ ಥ್ರೊ’ ಅಂತಲೇ ಒನ್ ಟೈಮ್ ಯೂಸ್‌ಗೆ ಅಂತ ಪರ್ಚೇಸು ಮಾಡ್ತಿರುವಂಥ ಯುನಿವರ್ಸಲ್ ಕಿಟ್‌ಗಳನ್ನೇ ಕೋವಿಡ್ ನೈಂಟೀನ್ ರಕ್ಷಾ ಕವಚಗಳಾಗಿ ಖರೀದಿಸಿರುವುದು ಅಕ್ಷಮ್ಯ ಅಪರಾಧ. ಇದನ್ನ ಬೆಂಗಳೂರಿನ ಕೆಡಿಎಲ್‌ಡಬ್ಲುಎಸ್ ಇವರು ಖರೀದಿಸಿದ್ದು, ಇದರಲ್ಲಿ ಫಿಫ್ಟಿ ಪರ್ಸಂಟ್ ಲಂಚ ವರ್ಕೌಟ್ ಮಾಡಲ್ಪಟ್ಟಿರುವ ಮಾಹಿತಿ ಹೊರಬಿದ್ದಿದೆ.

ನಾಲ್ನೂರು ರೂಪಾ ಐಟಮ್ಮಿಗೆ ಒಂದೂವರೆ ಸಾವಿರವಂತೆ!

ಉತ್ತರ ಕರ್ನಾಟಕದ ಬೆಳ್ಕಲೆಯಲ್ಲಿಯೂ, ಬೈಂದೂರಿನ ಸುಮುಖ್ ಎಂಬಲ್ಲಿಯೂ ಉತ್ಕೃಷ್ಟ ಮಟ್ಟದ ಕೊರೋನಾ ‘ರಕ್ಷಾಕವಚ’ ಒಂದಕ್ಕೆ ಒಂಬೈನೂರು ರೂಪಾಯಿ ರೇಟಿಗೆ ಲಭ್ಯವಿದ್ದರೂ, ಶ್ರೀರಾಮುಲು ಒಂದೂವರೆ ಸಾವಿರಕ್ಕೆ ಖರೀದಿಸಿರುವುದು ಅದರಲ್ಲೂ ತೀರಾ ಕಳಪೆ ಗುಣಮಟ್ಟದ ಅಂದರೆ ನಾಲ್ನೂರು-ಐನೂರು ರೂಪಾಯಿಗೆ ಸಿಗುವಂಥದ್ದನ್ನ ಸಾವಿರಾರು ರೂಪಾಯಿಗೆ ಖರೀದಿಸಿರುವುದೇ ಸರಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಲಾಸ್ಟ್ ಸಿಪ್!
ರಾಮುಲುವಿನ ಕಲಿಯುಗದ ರಾವಣಾವತಾರ ಬಗ್ಗೆ ಬರೆಯುತ್ತಾ ಹೋದರೆ, ಅದಕ್ಕೆ ಪೂರ್ಣವಿರಾಮಯ ಕೊಡುವಂತೆಯೇ ಇಲ್ಲ. ಅಷ್ಟೊಂದು ಅಗಾಧವಾದ ಸೆನ್ಸೆಶನಲ್ ಹಗರಣಗಳಿದ್ದಾವೆ. ಇವತ್ತಿನ ಅಂಕಣದಲ್ಲಿ ಕೊರೋನಾ ಕಬಳಿಕೆಯ ಆರಂಭಿಕ ಹಂತ ಮಾತ್ರ ಬರೆದಿದ್ದೇನೆ. ಇನ್ನು ಬೆಂಗಳೂರಿನ ಮಾಗಡಿ ರೋಡ್‌ನಲ್ಲಿರುವ ‘ಡ್ರಗ್ ಲಾಜಿಸ್ಟಿಕ್ ವೇರ್ ಹೌಸ್’ (ಪುರಾತನ ಜಿ.ಎಂ.ಎಸ್)ನಿಂದ ನೂರಾರು ಕೋಟಿಯ ಥೈಲಿ ‘ಶ್ರೀರಾವಣ!’ನ ಗೃಹಪ್ರವೇಶ ಮಾಡಿದೆಯಂತೆ! ಕೊರೋನಾಕ್ಕೆ ಸಂಬಂಧಿಸಿದ ಜೌಷಧ, ಪ್ರೋಟೆಕ್ಷನ್ ಕಿಟ್ ಸೇರಿದಂತೆ ಇತರೇ ಐಟಮ್ಮುಗಳ ಪರ್ಚೇಸಿನಲ್ಲಿ ಭಾರೀ ಗೋಲ್‌ಮಲ್ ನಡೆದಿದೆಯಂತೆ! ‘ರೈಟ್ ಟು ಇನ್‌ಫಾರೇಶನ್ ಆಕ್ಟ್’ ನಲ್ಲಿ ಇನ್‌ವಾಸ್, ಆರ್ಡರ್ ಕೋರಿದ್ದು, ಇವೆಲ್ಲಾ ಸಾಕ್ಷ್ಯಾಧಾರ ಸಹಿತ ನಿಮ್ಮ ಮುಂದಿಡಲಿದ್ದೇನೆ. ಏತನ್ಮಧ್ಯೆ. ಈ ಅಂಕಣ ಮುಗಿಸುವ ಹಂತದಲ್ಲಿ ಡೆಪ್ಯುಟಿ ಡೆರಕ್ಟರ್ ನಾರಾಯಣ, ಜಯರಾಮ, ಧ್ರುವ, ಅಂಬಿಕಾ, ರಂಗಣ್ಣ, ಆನಂದ್ರಾವ್ ಸರ್ಕಲ್ ಬಳಿಯ ಹೆಲ್ತ್ ಡಿಪಾರ್ಟ್‌ಮೆಂಟಿನ ಬಜೆಟ್ ಪ್ರಭಾಕರ, ಕೌಂಟರ್‌ಸೈನ್‌ನ ರವಿಕುಮಾರ್ ಮುಂತಾದ ಹೆಲ್ತ್ ಫಂಡ್‌ಗೆ ಕನ್ನಹಾಕುತ್ತಿರುವ ದರೋಡೆಕೋರರ ಗ್ಯಾಂಗ್ ಮತ್ತು ಆರೋಗ್ಯ ರಕ್ಷಾ ಸಮಿತಿಯ ನಿಧಿಯ, ಆಯುಷ್ಮಾನ್‌ಭವ ರಕ್ಷಾ ಕವಚ ಫಂಡೂ ಹಾಸ್ಪಿಟಲ್‌ಗಳಲ್ಲಿ ನುಂಗುತ್ತಿರುವ ಬಗ್ಗೆಯೂ ಡೀಟೈಲ್ಸುಗಳು ಬರತೊಡಗಿವೆ. ಇದರ ಬಗ್ಗೆ ಮುಂದಿನ ಅಂಕಣದಲ್ಲಿ ಒಂದೊಂದು ಆಸ್ಪತ್ರೆಯ ಕುರಿತಾಗಿ ನಿಮ್ಮ ಮುಂದಿಡಲಿದ್ದೇನೆ – ಸಾಕ್ಷ್ಯಾಧಾರ ಸಹಿತವಾಗಿ!
-ಎಸ್ಸೆನ್ ಕುಂಜಾಲ್
ನಿಮ್ಮ ಅನಿಸಿಕೆ, ಅಭಿಪ್ರಾಯಗಳಿದ್ದಲ್ಲಿ ಇ-ಮೇಲ್[email protected]ಗೆ ಕಳುಹಿಸಬಹುದು ಅಥವಾ ದೂರವಾಣಿ 9845070166 ಗೆ ಕರೆ ಮಾಡಬಹುದು

Leave a Reply

Your email address will not be published. Required fields are marked *

error: Content is protected !!