ಸಹಕಾರಿ ಬ್ಯಾಂಕ್‌ಗಳ ಕಾಯ್ದೆ ತಿದ್ದುಪಡಿ: ನಿರ್ಮಲಾ ಸೀತಾರಾಮನ್

ಮುಂಬೈ: ಸಹಕಾರಿ ಬ್ಯಾಂಕ್‌ಗಳ ಆಡಳಿತ ಮತ್ತು ನಿಯಂತ್ರಣ ಕ್ರಮಗಳಲ್ಲಿ ಸುಧಾರಣೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಸಮಿತಿ ರಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಪ್ರಕಟಿಸಿದ್ದಾರೆ .
‘ಅಗತ್ಯ ಬಿದ್ದರೆ ಸಹಕಾರಿ ಬ್ಯಾಂಕ್‌ ಕಾಯ್ದೆಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಗತ್ಯ ತಿದ್ದುಪಡಿಗಳನ್ನೂ ತರಲಾಗುವುದು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಆರ್ಥಿಕ ವ್ಯವಹಾರ, ಹಣಕಾಸು ಸೇವೆ, ಗ್ರಾಮೀಣ ವ್ಯವಹಾರ ಮತ್ತು ನಗರಾಭಿವೃದ್ಧಿ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್‌ ಅವರನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಸಹಕಾರಿ ಬ್ಯಾಂಕ್‌ಗಳಲ್ಲಿ ಹಗರಣಗಳು ನಡೆಯುವುದನ್ನು ತಪ್ಪಿಸುವ ಮತ್ತು ಅವುಗಳ ಮೇಲಿನ ನಿಯಂತ್ರಣ ಕ್ರಮಗಳನ್ನು ಬಲಪಡಿಸುವ ಬಗ್ಗೆ ಸಮಿತಿ ಅಧ್ಯಯನ ನಡೆಸಲಿದೆ. ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರವು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅಗತ್ಯ ಸಲಹೆಗಳನ್ನೂ ನೀಡಲಿದೆ’ ಎಂದರು.
ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ನಲ್ಲಿ (ಪಿಎಂಸಿ) ನಡೆದಿರುವ ₹ 4,500 ಕೋಟಿಗಳ ಹಗರಣ ಸಂಬಂಧ ಬ್ಯಾಂಕ್‌ನ ಗ್ರಾಹಕರ ತೀವ್ರ ಆಕ್ರೋಶವನ್ನೂ ಸಚಿವೆ ಎದುರಿಸಬೇಕಾಯಿತು.
ದಕ್ಷಿಣ ಮುಂಬೈನಲ್ಲಿನ ಬಿಜೆಪಿ ಕಚೇರಿಯಲ್ಲಿ ನಿರ್ಮಲಾ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲು ಬಂದಾಗ, ‘ಪಿಎಂಸಿ’ ಗ್ರಾಹಕರು ಘೋಷಣೆ ಕೂಗಿ ತಮ್ಮ ಹಣ ಮರಳಿಸುವಂತೆ ಒತ್ತಾಯಿಸಿದರು.
ಠೇವಣಿದಾರರ ಹಿತರಕ್ಷಿಸಲು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಜತೆ ತಾವು ಚರ್ಚಿಸುವುದಾಗಿ ನಿರ್ಮಲಾ ಸೀತಾರಾಮ್ ಭರವಸೆ ನೀಡಿದ್ದಾರೆ.
‘ತಮ್ಮ ಹಣದ ಸುರಕ್ಷತೆ ಬಗ್ಗೆ ಸಚಿವೆ ಭರವಸೆ ನೀಡುತ್ತಾರೆ ಎಂದು ಠೇವಣಿದಾರರು ನಿರೀಕ್ಷಿಸಿದ್ದರು. ಆದರೆ, ಅವರ ವರ್ತನೆಯಿಂದ ನಮಗೆಲ್ಲ ನಿರಾಶೆಯಾಗಿದೆ. 16 ಲಕ್ಷ ಠೇವಣಿದಾರರು ಸಂಕಷ್ಟದಲ್ಲಿ ಇದ್ದಾರೆ. ಈ ಹಗರಣದಲ್ಲಿ ನಮ್ಮದೇನೂ ತಪ್ಪಿಲ್ಲ’ ಎಂದು ಠೇವಣಿದಾರರೊಬ್ಬರು ಸುದ್ದಿಗಾರರಿಗೆ ತಿಳಿಸಿದರು.
ಸಹಕಾರಿ ಬ್ಯಾಂಕ್‌ಗಳನ್ನು ರಾಜಕಾರಣಿಗಳು ಮತ್ತು ಕೆಲ ಪ್ರಭಾವಿ ವ್ಯಕ್ತಿಗಳು ತಮ್ಮ ಸ್ವಂತ ಆಸ್ತಿ ಎಂಬಂತೆ ಪರಿಗಣಿಸಿದ್ದಾರೆ. ನಿರ್ದೇಶಕ ಮಂಡಳಿಗಳು ಬ್ಯಾಂಕಿಂಗ್‌ ನಿಯಂತ್ರಣ ಕ್ರಮಗಳನ್ನು ನಿರ್ಲಕ್ಷಿಸುತ್ತಿವೆ. ವಸೂಲಾಗದ ಸಾಲದ ಹೊರೆ ಹೆಚ್ಚುತ್ತಿದೆ. ಠೇವಣಿದಾರರ ಹಣಕ್ಕೆ ರಕ್ಷಣೆಯೇ ಇಲ್ಲದಂತಾಗಿದೆ. ಹಲವಾರು ಸಹಕಾರಿ ಬ್ಯಾಂಕ್‌ಗಳು ವೈಫಲ್ಯ ಕಂಡಿವೆ. ಹಗರಣಕ್ಕೆ ಸಿಲುಕಿರುವ ಸಹಕಾರಿ ಬ್ಯಾಂಕ್‌ಗಳ ಸಾಲಿಗೆ ಈಗ ‘ಪಿಎಂಸಿ’ ಹೊಸದಾಗಿ ಸೇರ್ಪಡೆಗೊಂಡಿದೆ.

Leave a Reply

Your email address will not be published. Required fields are marked *

error: Content is protected !!