ನಾಥೂರಾಮ್ ಗೋಡ್ಸೆ ಪರ ಹೇಳಿಕೆಗೆ ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ಮಡಿಕೇರಿ : ರಾಷ್ಟ್ರಪಿತ ಮಹಾತ್ಮ ಗಾಂಧೀ ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ ಅವರನ್ನು ದೇಶದ್ರೋಹಿ ಎಂದು ಕರೆಯದೆ ಅಪ್ಪಟ ದೇಶಭಕ್ತ ಎಂದು ವಿಜೃಂಭಿಸಿದ ಬಿಜೆಪಿ ನಾಯಕಿ ಸಾದ್ವಿ ಪ್ರಜ್ಞಾಸಿಂಗ್ ಮತ್ತು ಇವರ ಹೇಳಿಕೆಯನ್ನು ಬೆಂಬಲಿಸಿದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿದ ಕಾಂಗ್ರೆಸ್ ಪ್ರಮುಖರು ಬಿಜೆಪಿಯ ಮೂವರು ನಾಯಕರ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಸಮಾನತೆ ಮತ್ತು ಸಂವಿಧಾನದ ಆಶಯದಂತೆ ಬದುಕಬೇಕಾಗಿದೆ. ಆದರೆ ಬಿಜೆಪಿಯ ಕೆಲವು ನಾಯಕರು ಗಾಂಧೀಜಿಯನ್ನು ಗುಂಡಿಕ್ಕಿ ಕೊಲೆಗೈದ ಗೋಡ್ಸೆಯನ್ನು ವೈಭವೀಕರಣ ಮಾಡುವ ಮೂಲಕ ವಿಚಿತ್ರ ಹೇಳಿಕೆ ಸೃಷ್ಟಿ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಸಮಾಜಘಾತುಕ ಹೇಳಿಕೆಯ ಮೂಲಕ ಅಶಾಂತಿ ಮೂಡಿಸಿ ಒಡಕು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೇಳುವ ಮೂಲಕ ಗಾಂಧೀಜಿಯನ್ನು ಕೊಂದಿರುವುದು ಸರಿ ಎಂದು ಪ್ರತಿಬಿಂಬಿಸುತ್ತಿರುವುದು ರಾಷ್ಟ್ರದ್ರೋಹದ ಕೆಲಸವಾಗಿದೆ. ಬಿಜೆಪಿಗೆ ಮೌಲ್ಯಗಳು ಇದ್ದರೆ ಇಂಥ ರಾಷ್ಟ್ರದ್ರೋಹ ಹೇಳಿಕೆ ನೀಡಿರುವ ಮೂವರನ್ನು ಪಕ್ಷದಿಂದ ಉಚ್ಛಾಟಣೆ ಮಾಡಬೇಕು ಮತ್ತು ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.