ಉದ್ಯಮಿ ಸಿದ್ಧಾರ್ಥ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ : ಚಿಕ್ಕಮಗಳೂರಿನತ್ತ ಮುಖ್ಯಮಂತ್ರಿ
ಉದ್ಯಮಿ ವಿಜಿ ಸಿದ್ಧಾರ್ಥ ಹೆಗ್ಡೆ ನಿಧನ ಹಿನ್ನಲೆಯಲ್ಲಿ ಇಂದು ಚಿಕ್ಕಮಗಳೂರು ಜಿಲ್ಲೆಯ ಚೇತನ ಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಆರಂಭವಾಗಿದೆ. ಮಂಗಳೂರು ಉಳ್ಳಾಲ ನಡುವಿನ ನೇತ್ರಾವತಿ ಸೇತುವೆಯಿಂದ ನಾಪತ್ತೆಯಾಗಿದ್ದ ಖ್ಯಾತ ಉದ್ಯಮಿ ವಿಜಿ ಸಿದ್ಧಾರ್ಥ ಹೆಗ್ಡೆಯವರ ಮೃತದೇಹ ಇಂದು ಪತ್ತೆಯಾಗಿದ್ದು ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಇಂದು ಚಿಕ್ಕಮಗಳೂರು ಜಿಲ್ಲೆಯ ಚೇತನ ಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸುವ ಮುನ್ನ ನಗರದ ಮೂಡಿಗೆರೆ ರಸ್ತೆಯಲ್ಲಿರುವ ಎಬಿಸಿ ಕಾಫಿ ಕೂಲಿಂಗ್ ಆವರಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಒದಗಿಸಲು ಸಿದ್ಧತೆ ನಡೆಸಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಳಿಯ ಮತ್ತು ಖ್ಯಾತ ಉದ್ಯಮಿಯಾಗಿರುವ ಸಿದ್ಧಾರ್ಥ್ ಅವರ ಅಂತಿಮ ದರ್ಶನ ಪಡೆಯಲು ಮುಖ್ಯಮಂತ್ರಿ ಸಹಿತ ಹಲವಾರು ಗಣ್ಯಾತಿ ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ಮತ್ತು ಸಾವಿರಾರು ಸಾರ್ವಜನಿಕರು ಅಂತಿಮ ದರ್ಶನಕ್ಕೆ ಬರುವ ನಿರೀಕ್ಷೆಯಿದ್ದು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ.
ಮಧ್ಯಾಹ್ನ ಒಂದು ಮೂವತ್ತರ ಸುಮಾರಿಗೆ ಆಗಮಿಸಲಿರುವ ಪಾರ್ಥಿವ ಶರೀರವನ್ನು ಸಂಜೆ ನಾಲ್ಕು ಮೂವತ್ತು ರವರೆಗೆ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿಕೊಡಲಾಗಿದೆ.
ಖ್ಯಾತ ಉದ್ಯಮಿ ಮತ್ತು ಎಸ್ ಎಂ ಕೃಷ್ಣ ರವರ ಅಳಿಯ ಸಿದ್ಧಾರ್ಥ್ ಹೆಗ್ಡೆಯವರ ಅಂತಿಮ ದರ್ಶನ ಪಡೆಯಲು ಮುಖ್ಯಮಂತ್ರಿ ಬಿಎಸ್ವೈ ಯಡಿಯೂರಪ್ಪ ಮಧ್ಯಾಹ್ನ 2.40 ಕ್ಕೆ ಹೆಲಿಕಾಪ್ಟರ್ ಮೂಲಕ ಚಿಕ್ಕಮಗಳೂರಿಗೆ ಆಗಮಿಸಲಿದ್ದಾರೆ. ಅಂತಿಮ ದರ್ಶನ ಪಡೆದ ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉದ್ಯಮಿ ಸಿದ್ಧಾರ್ಥ ಹೆಗ್ಡೆಯವರ ತಂದೆ ಗಂಗಯ್ಯ ಹೆಗ್ಡೆಯವರಿಗೆ ಚಿಕಿತ್ಸೆ ಮುಂದುವರಿಸಿದ್ದು ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.