ಚಿಕ್ಕಮಗಳೂರು :ಘಾಟಿ ಭಾರಿ ಪ್ರಮಾಣದ ಮಳೆ ಹಾಗೂ ಗಾಳಿಯಿಂದಾಗಿ ಭೂ ಕುಸಿತ, ಗುಡ್ಡ ಕುಸಿತ
ಮಂಗಳೂರು/ ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಭಾರಿ ಪ್ರಮಾಣದ ಮಳೆ ಹಾಗೂ ಗಾಳಿಯಿಂದಾಗಿ ಭೂ ಕುಸಿತ, ಗುಡ್ಡ ಕುಸಿತ ಮುಂದುವರಿದಿದ್ದು, ಇದೇ 14ರ ಮಧ್ಯರಾತ್ರಿವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಗುಡ್ಡ ಕುಸಿತ ಜಾಗದಲ್ಲಿ ಪದೇ ಪದೇ ವಾಹನ ದಟ್ಟಣೆ ಉಂಟಾಗುತ್ತಿರುವುದರಿಂದ ಕುಸಿತದ ಮಣ್ಣನ್ನು ತೆರವುಗೊಳಿಸಲು ಕಷ್ಟವಾಗುತ್ತಿದೆ. ಅಲ್ಲದೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ವಾಹನ ಸಂಚಾರ ನಿಷೇಧಿಸಿದ್ದಾರೆ.
ಶಿರಾಡಿ ಘಾಟಿಯಲ್ಲಿ ಸಕಲೇಶಪುರ ಬಳಿ ಭೂಕುಸಿತ ಉಂಟಾಗುತ್ತಿದ್ದು, ಶಿರಾಡಿಯಲ್ಲಿ ಇದೇ 12 ರವರೆಗೆ ಸಂಚಾರ ಬಂದ್ ಮಾಡಿ, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸಂಪಾಜೆ ಘಾಟಿಯಲ್ಲಿ ಲಘು ವಾಹನ ಮತ್ತು ಕೆಎಸ್‌ಆರ್‌ಟಿಸಿ ಪ್ರಯಾಣಿಕ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ನೇತ್ರಾವತಿ ನದಿ ನೀರು ಹರಿಯುತ್ತಿದ್ದು, ಬೆಂಗಳೂರು–ಮಂಗಳೂರು ವಾಹನ ಸಂಚಾರ ಶುಕ್ರವಾರ ಮಧ್ಯಾಹ್ನದಿಂದ ಸ್ಥಗಿತವಾಗಿದೆ. ಬೆಳ್ತಂಗಡಿಯಲ್ಲಿ ಪ್ರವಾಹ ಸ್ಥಿತಿ ಉದ್ಭವಿಸಿದ್ದು, ತಾಲ್ಲೂಕಿನ ಕೊಲ್ಲಿಯಲ್ಲಿ 35ಕ್ಕೂ ಹೆಚ್ಚು ಕುಟುಂಬಗಳು ಪ್ರವಾಹದಲ್ಲಿ ಸಿಲುಕಿವೆ.
ವಿಮಾನ ಹಾರಾಟ ವ್ಯತ್ಯಯ: ಮಂಗಳೂರಿನಿಂದ ಹೊರಡುವ ವಿಮಾನಗಳ ಹಾರಾಟದಲ್ಲಿ ಶುಕ್ರವಾರವೂ ವಿಳಂಬವಾಗಿದೆ. ಬೆಂಗಳೂರು–ಮಂಗಳೂರು ರೈಲು ಸಂಚಾರವೂ ಸ್ಥಗಿತವಾಗಿದೆ