ಕೇಂದ್ರ ಬಜೆಟ್; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ
ನವದೆಹಲಿ, ಜುಲೈ 5: ಭರ್ಜರಿ ಬಹುಮತದೊಂದಿಗೆ ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.0 ಎನ್ಡಿಎ ಸರ್ಕಾರದ ಮೊದಲ ಬಜೆಟ್ಅನ್ನು ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಮಂಡಿಸುತ್ತಿದ್ದಾರೆ.
ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಒಂದು ವಿಶೇಷತೆಯಿದೆ. ಕೇಂದ್ರ ಹಣಕಾಸು ಸಚಿವರು ಸೂಟ್ ಕೇಸ್ ನಲ್ಲಿ ಬಜೆಟ್ ಪ್ರತಿಯನ್ನು ತರುತ್ತಾರೆ. ಆದರೆ ಈ ಬಾರಿ ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್ ಕೆಂಪು ಬಟ್ಟೆಯಲ್ಲಿ ಬಜೆಟ್ ಪ್ರತಿಯನ್ನು ಹಿಡಿದು ಸಂಸತ್ತಿಗೆ ಆಗಮಿಸಿದ್ದಾರೆ.
ಸೂಟ್ ಕೇಸು ಪಾಶ್ಚಿಮಾತ್ಯ ಸಂಸ್ಕೃತಿ, ಕೆಂಪು ಬಣ್ಣ ಕೂಡ ಪಾಶ್ಚಿಮಾತ್ಯ ಗುಲಾಮಗಿರಿಯಿಂದ ಹೊರಬಂದಿರುವ ಸಂಕೇತವಾಗಿರುವುದರಿಂದ ಸಚಿವೆ ನಿರ್ಮಲಾ ಸೀತಾರಾಮನ್ ಕೆಂಪು ಬಣ್ಣದ ಬಟ್ಟೆಯಲ್ಲಿ ಗಂಟುಕಟ್ಟಿ ಬಜೆಟ್ ಪ್ರತಿಯನ್ನು ತಂದಿದ್ದಾರೆ ಎಂದು ಕೇಂದ್ರ ಹಣಕಾಸು ಇಲಾಖೆಯ ಮುಖ್ಯ ಸಲಹೆಗಾರರು ಹೇಳಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಪ್ರಸಕ್ತ ಸಾಲಿನ ಬಜೆಟ್ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇವುಗಳಲ್ಲಿ ಜಿಡಿಪಿ ಪ್ರಗತಿ, 2025ಕ್ಕೆ ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯ ದೇಶವನ್ನಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯನ್ನು ಈಡೇರಿಸಲು ತೆಗೆದುಕೊಳ್ಳುವ ಕ್ರಮಗಳು, ತೆರಿಗೆ ಸಂಗ್ರಹದಲ್ಲಿನ ಬದಲಾವಣೆಗಳು, ಕೃಷಿ ಕ್ಷೇತ್ರಕ್ಕೆ ಆದ್ಯತೆ, ರೈಲ್ವೆ ಯೋಜನೆಗಳು, ನಿರುದ್ಯೋಗ ಸಮಸ್ಯೆಗೆ ಪರಿಹಾರ, ಆರೋಗ್ಯ, ಮೂಲಭೂತ ಸೌಕರ್ಯದ ವೃದ್ಧಿ ಸೇರಿದಂತೆ ಇತರೆ ಅನೇಕ ಅಂಶಗಳು ಸೇರಿಕೊಂಡಿವೆ. ಅಗತ್ಯ ವಸ್ತುಗಳು, ಐಷಾರಾಮಿ ಸರಕುಗಳ ಬೆಲೆ ಏರಿಕೆ ಮತ್ತು ಇಳಿಕೆ, ತೆರಿಗೆ, ಅದಾಯ ತೆರಿಗೆಯಲ್ಲಿ ಬದಲಾವಣೆಗಳ ಬಗ್ಗೆಯೂ ಹಲವು ನಿರೀಕ್ಷೆಗಳಿವೆ.