ಬಕ್ರೀದ್ ಹಬ್ಬವನ್ನು ಸರಳತೆಯಿಂದ ಆಚರಿಸಿ, ನೆರೆ ಸಂತ್ರಸ್ತರಿಗೆ ನೆರವಾಗೋಣ : ಇಸ್ಮಾಯಿಲ್ ಆತ್ರಾಡಿ
ಉಡುಪಿ – ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾಗುತ್ತಿದ್ದು, ಪ್ರವಾಹದಿಂದ ರಾಜ್ಯದ ಬಹಳಷ್ಟು ಜಿಲ್ಲೆಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನದಿಗಳು ಉಕ್ಕಿ ಹರಿಯುತ್ತಿವೆ. ದಿನೇ ದಿನೇ ಜನರ ಸಂಕಷ್ಟಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಈ ವರ್ಷ ಬಕ್ರೀದ್ ಹಬ್ಬವನ್ನು ಸರಳತೆಯಿಂದ ಆಚರಿಸಿ, ಉಳಿದ ಹಣವನ್ನು ಸಂತ್ರಸ್ತರ ಉಳಿವಿಗಾಗಿ ವಿನಿಯೋಗಿಸೋಣ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ಜಿಲ್ಲಾಧ್ಯಕ್ಷರಾದ ಇಸ್ಮಾಯಿಲ್ ಆತ್ರಾಡಿ ಮುಸ್ಲಿಂ ಬಾಂಧವರಲ್ಲಿ ವಿನಂತಿ ಮಾಡಿದ್ದಾರೆ.
ಕಳೆದ ಹಲವಾರು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಹಲವಾರು ಜನರು ಜೀವವನ್ನು ಕಳೆದುಕೊಂಡಿದ್ದು, ಸಾವಿರಾರು ಜನರು ತಮ್ಮ ಮನೆಯನ್ನೇ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂಕ ಪ್ರಾಣಿಗಳ ಕಷ್ಟ ಹೇಳತೀರದು. ಇಂತಹ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನತೆಯೊಂದಿಗೆ ನಾವೆಲ್ಲರೂ ಜೊತೆಯಾಗಿ ನೆರವಾಗೋಣ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆ ಮಠ ಎಲ್ಲವನ್ನೂ ಕಳೆದುಕೊಂಡು ನಮ್ಮ ಕರ್ನಾಟಕದ ಕೆಲ ಭಾಗದ ಅಮ್ಮಂದಿರು ಸಹೋದರ ಸಹೋದರಿಯರು ನೋವು ಅನುಭವಿಸುತ್ತಿರುವಾಗ ನಮ್ಮಿಂದ ಖಂಡಿತ ಹಬ್ಬವನ್ನು ಸಡಗರದಿಂದ ಆಚರಿಸಲು ಸಾಧ್ಯವಿಲ್ಲ. ಈ ವರ್ಷದ ಬಕ್ರೀದ್ ಹಬ್ಬವನ್ನು ಆದಷ್ಟು ಸರಳತೆಯಿಂದ ಆಚರಿಸಿ, ಉಳಿದ ಹಣವನ್ನು ಸಂತ್ರಸ್ತರ ಉಳಿವಿಗಾಗಿ ವಿನಿಯೋಗಿಸೋಣ. ನಮ್ಮ ಊರಿನಲ್ಲಿ ಪ್ರಾಕೃತಿಕ ವಿಕೋಪ ಆಗದಿದ್ದರೂ, ಪಕ್ಕದ ಊರಿನಲ್ಲಿ ಜಿಲ್ಲೆಯಲ್ಲಿ, ಗ್ರಾಮದಲ್ಲಿ ಕಷ್ಟಪಡುವ ಸಂತ್ರಸ್ತರ ದುಃಖದಲ್ಲಿ ಜೊತೆಯಾಗೋಣ ಎಂದು ಇಸ್ಮಾಯಿಲ್ ಅತ್ರಾಡಿ ವಿನಂತಿ ಮಾಡಿದ್ದಾರೆ.