ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಕರೆ

ಉಡುಪಿ: ದೇಶದಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರದ ವಿರುದ್ಧ ವಕೀಲರು ಕಾನೂನು ಹೋರಾಟ ಮಾಡಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಸಲಹೆ ನೀಡಿದರು.

ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ‘ವಕೀಲರು ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯಬೇಕು. ಯಾವುದೇ ವ್ಯಕ್ತಿಯ ಸ್ವಾತಂತ್ರ್ಯ ಹರಣವಾದರೆ ಅದರನ್ನು ರಕ್ಷಿಸಬೇಕು ಎಂದರು.

ಒಂದು ದೇಶದ ಬೆಳವಣಿಯನ್ನು ಅಲ್ಲಿನ ನ್ಯಾಯಾಂಗ ವ್ಯವಸ್ಥೆಯ ಜತೆಗೆ ತುಲನೆ ಮಾಡಲಾಗುತ್ತದೆ. ನ್ಯಾಯದಾನ ಪ್ರಕ್ರಿಯೆ ಪಾರದರ್ಶಕವಾಗಿದ್ದರೆ, ದೇಶದ ಅಭಿವೃದ್ಧಿಗೆ ಸಹಕಾರಿ ಎಂದರು.


ವಕೀಲರು ಹಾಗೂ ನ್ಯಾಯಾಧೀಶರು ರಥದ ಚಕ್ರಗಳಿದ್ದಂತೆ. ಒಟ್ಟಾಗಿ ಸಾಗಿದರೆ ಸಮಸ್ಯೆ ಉದ್ಭವಿಸುವುದಿಲ್ಲ. ಪ್ರತಿಯೊಬ್ಬರೂ ಅವರ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ವಕೀಲ ವೃತ್ತಿ ಇತರೆ ವೃತ್ತಿಗಳಿಗಿಂತ ಶ್ರೇಷ್ಠ ಹಾಗೂ ಗೌರವಯುತವಾದುದ್ದು. ಸಮಾಜಕ್ಕೆ ಸಹಾಯ ಮಾಡುವ ಅಶಕ್ತರಿಗೆ ನೆರವಾಗುವ ಅವಕಾಶ ಸಿಗುತ್ತದೆ. ವೃತ್ತಿ ಗೌರವ ಕಾಪಾಡಿದರೆ, ಮರಣಾನಂತರವೂ ಜನರು ಸ್ಮರಿಸುತ್ತಾರೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ.ಎಂ.ಜೋಷಿ, ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೆನಾಲ್ಡ್‌ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!