ಯಾವುದೇ ಕಾರಣಕ್ಕೂ ಕೆಫೆ ಕಾಫಿ ಡೇ ಮುಚ್ಚಲ್ಲ : ನಿರ್ದೇಶಕ ಮಂಡಳಿ
ಬೆಂಗಳೂರು: ಯಾವುದೇ ಕಾರಣಕ್ಕೂ ಕೆಫೆ ಕಾಫಿ ಡೇ ಸಂಸ್ಥೆಯನ್ನು ಮುಚ್ಚದಿರುವ ಕುರಿತು ನಿರ್ದೇಶಕರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ನಗರದ ಮಲ್ಯ ಆಸ್ಪತ್ರೆ ಸಮೀಪ ಇರುವ ಕಚೇರಿಯಲ್ಲಿ ಸಂಸ್ಥೆಯ ಭವಿಷ್ಯದ ಕುರಿತು ಕೆಫೆ ಕಾಫಿ ಡೇ ಸಂಸ್ಥೆಯ ನಿರ್ದೇಶಕರಾದ ನಿತೀಶ್ ಬಾಗ್ಮನೆ, ಎಸ್.ವಿ.ರಂಗನಾಥ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಸಿಸಿಡಿಯ ಮುಂದಿನ ಕಾರ್ಯಚಟುವಟಿಕೆ ಬಗ್ಗೆ ನಿರ್ದೇಶಕರು ಸಭೆಯಲ್ಲಿ ಚರ್ಚಿಸಿದ್ದು, ಎಂತಹ ಬಿಕ್ಕಟ್ಟಿನ ಸಂದರ್ಭ ಎದುರಾದರೂ ಸಂಸ್ಥೆಯನ್ನು ಮುಚ್ಚದೇ ಮುಂದುವರಿಸಿಕೊಂಡು ಹೋಗುವ ಬಗ್ಗೆ ಬಹುತೇಕರು ಆಶಯ ವ್ಯಕ್ತಪಡಿಸಿದರು. ಹೀಗಾಗಿ ಸಿದ್ಧಾರ್ಥ್ ಕನಸಿನ ಕೂಸು ಕೆಫೆ ಕಾಫಿ ಡೇಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂಬ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಬ್ಯಾಂಕ್ನಲ್ಲಿ ಸಾಲ ಮಾಡಿ ಹಾಗೂ ಕಾಫಿ ತೋಟವನ್ನು ಮಾರಿ ಸುಮಾರು 5 ಲಕ್ಷ ರೂ. ಹಣದಿಂದ 1993ರಲ್ಲಿ ಕಾಫಿ ಉದ್ದಿಮೆಗೆ ಸಿದ್ಧಾರ್ಥ್ ಕಾಲಿಟ್ಟಿದ್ದರು. ಕಾಫಿ ಡೇ ಪ್ರಾರಂಭಿಸುತ್ತಿದ್ದಂತೆ ತಮ್ಮ ಜೀವಮಾನದಲ್ಲಿ ಮತ್ತೆಂದು ತಿರುಗಿಯೂ ನೋಡಲಿಲ್ಲ. 24ನೇ ವಯಸ್ಸಿಗೆ ಸ್ಟಾಕ್ ಮಾರ್ಕೆಟ್ನಲ್ಲಿ ಷೇರು ಖರೀದಿಸಿದ್ದರು. ಚಿಕ್ಕಮಗಳೂರು-ಹಾಸನ-ಮಡಿಕೇರಿಯಲ್ಲಿ ನಷ್ಟದಲ್ಲಿದ್ದ ಕಾಫಿ ತೋಟಗಳನ್ನು ಖರೀದಿಸಿ, ಹಂತಹಂತವಾಗಿ ಬೆಳೆಯುತ್ತಾ 13 ಸಾವಿರಕ್ಕೂ ಅಧಿಕ ಹೆಕ್ಟೇರ್ ಕಾಫಿ ತೋಟದ ಮಾಲೀಕರಾಗಿದ್ದರು.
1996ರಲ್ಲಿ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಮೊದಲ ಕಾಫಿ ಡೇ ಆರಂಭಿಸಿದ್ದರು. ಒಂದು ನೂರಾಗಿ, ನೂರು ಐನೂರಾಗಿ ವಿಶ್ವಾದ್ಯಂತ 10ಕ್ಕೂ ಹೆಚ್ಚು ದೇಶ ಸೇರಿದಂತೆ 1,772 ಕಾಫಿ ಡೇ ಔಟ್ಲೇಟ್ನ ಒಡೆಯರಾದರು. ವಾರ್ಷಿಕ 28 ಸಾವಿರ ಟನ್ ಕಾಫಿ ರಫ್ತು ಮಾಡುವ ಮೂಲಕ ಜಗತ್ತೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದರು. ಕಾಫಿ ಡೇಗಳಿಗೆ ಬೇಕಾದ ಬೀಜವನ್ನು ಸ್ವಂತ ತೋಟದಿಂದಲೇ ಬೆಳೆಯುತ್ತಿದ್ದರು. ಕಾಫಿಯ ಜೊತೆ ವಿವಿಧ ಕಂಪನಿಗಳನ್ನು ಆರಂಭಿಸಿದ್ದರು