ಕೆಫೆ ಕಾಫಿ ಡೇ ಸಿದ್ಧಾರ್ಥ ಸಾವು ಆತ್ಮಹತ್ಯೆಯಿಂದಲೇ:ವರದಿ ಬಹಿರಂಗ

ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ಸಾವು ಆತ್ಮಹತ್ಯೆಯಿಂದಲೇ ಸಂಭವಿಸಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ತಜ್ಞರು ವರದಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರೂ ಈ ವರದಿಯನ್ನು ಅನುಮೋದಿಸಿದ್ದಾರೆ.

ಎಫ್‌ಎಸ್‌ಎಲ್ ವರದಿ ಕಳೆದ ವಾರ ತನಿಖಾ ತಂಡಕ್ಕೆ ತಲುಪಿತ್ತು. ಅದನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರಿಗೆ ನೀಡಿದ್ದ ತನಿಖಾಧಿಕಾರಿ, ಅವರ ಅಭಿಪ್ರಾಯ ಕೋರಿದ್ದರು. ಎಫ್‌ಎಸ್‌ಎಲ್‌ ವರದಿಯನ್ನು ಅಧ್ಯಯನ ನಡೆಸಿ ಶುಕ್ರವಾರ ಅಂತಿಮ ವರದಿಯನ್ನು ಸಲ್ಲಿಸಿರುವ ವೈದ್ಯರು ‘ಸಿದ್ಧಾರ್ಥ ಅವರ ಸಾವು ಆತ್ಮಹತ್ಯೆಯಿಂದ ಸಂಭವಿಸಿದೆ’ ಎಂದು ಹೇಳಿದ್ದಾರೆ.
ಈ ಕುರಿತು  ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ‘ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಫ್‌ಎಸ್‌ಎಲ್‌ ತಜ್ಞರು ವರದಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಈ ವರದಿಯನ್ನು ಅನುಮೋದಿಸಿದ್ದಾರೆ. ತನಿಖಾ ತಂಡವೂ ಬಹುತೇಕ ಅದೇ ತೀರ್ಮಾನಕ್ಕೆ ಬಂದಿದೆ’ ಎಂದರು.
ಜುಲೈ 29ರಂದು ಸಂಜೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಲ್ಲಾಪು ಬಳಿಯ ನೇತ್ರಾವತಿ ಸೇತುವೆ ಬಳಿಯಿಂದ ಸಿದ್ಧಾರ್ಥ ನಾಪತ್ತೆಯಾಗಿದ್ದರು. ಆಗಸ್ಟ್‌ 1ರಂದು ಬೆಳಿಗ್ಗೆ ದಿನಗಳ ಬಳಿಕ  ಹೊಯ್ಗೆ ಬಜಾರ್ ಎಂಬಲ್ಲಿ ನದಿ ತೀರದಲ್ಲಿ ಅವರ ಶವ ಪತ್ತೆಯಾಗಿತ್ತು. ಸಾವಿಗೂ ಮುನ್ನ ಸಿದ್ಧಾರ್ಥ ಬರೆದಿಟ್ಟಿದ್ದರು ಎನ್ನಲಾದ ಪತ್ರವೊಂದು ಜುಲೈ 30ರಂದು ಬಹಿರಂಗಗೊಂಡಿತ್ತು.
ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ನೀರಿಗೆ ಬಿದ್ದು ಉಸಿರುಗಟ್ಟಿ ಸಿದ್ಧಾರ್ಥ ಅವರ ಸಾವು ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದ್ದರು. ಈಗ ಅಂತಿಮ ವರದಿ ಪ್ರಕರಣದ ತನಿಖಾಧಿಕಾರಿಯಾಗಿರುವ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೋದಂಡರಾಮ ಅವರಿಗೆ ತಲುಪಿದೆ. ಸಿದ್ಧಾರ್ಥ ಅವರ ಸಾವಿಗೆ ಸಂಬಂಧಿಸಿದ ಇತರೆ ಅಂಶಗಳ ಬಗ್ಗೆಯೂ ತನಿಖೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!