ಸಚಿವ ಸ್ಥಾನಕ್ಕೆ ಸಿಟಿ ರವಿ ರಾಜೀನಾಮೆಗೆ ನಿರ್ಧಾರ?
ಬೆಂಗಳೂರು: ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಖಾತೆ ಹಂಚಿಕೆ ಹಾಗೂ ಡಿಸಿಎಂ ಸ್ಥಾನಗಳು ಘೋಷಣೆಯಾಗುತ್ತಿದಂತೆ ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು,ಸಚಿವ ಸಿಟಿ ರವಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸರ್ಕಾರಿ ಕಾರನ್ನು ಈಗಾಗಲೇ ವಾಪಸ್ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ತಮಗೆ ನೀಡಿದ್ದ ಪ್ರವಾಸೋದ್ಯಮ ಖಾತೆ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅಲ್ಲದೇ ರಾಜ್ಯಾಧ್ಯಕ್ಷ ಸ್ಥಾನ ಪಡೆಯುವಲ್ಲಿಯೂ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಪಕ್ಷದಲ್ಲಿನ ಸದ್ಯದ ಕೆಲ ಬೆಳವಣಿಗೆ ಹಾಗೂ ಅಸಮಾಧಾನಿತರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ರಾಜೀನಾಮೆ ನೀಡಿಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮೂಲಗಳ ಮಾಹಿತಿ ಅನ್ವಯ ನಾಳೆ ಬೆಳಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿರುವ ಸಿಟಿ ರವಿ ಅವರು ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಕುರಿತು ಸ್ಪಷ್ಟನೆ ಪಡೆಯಲು ಸಿಟಿ ರವಿ ಸಂಪರ್ಕ ಮಾಡಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ.
ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ಸಿಟಿ ರವಿ ಅವರು ಅಸಮಾಧಾನದಿಂದ ನಿರ್ಧಾರ ಕೈಗೊಂಡಿದ್ದಾರ, ಪಕ್ಷದ ನಾಯಕರಿಗೆ ತಿಳಿಸದೆ ರಾಜೀನಾಮೆ ನೀಡಲು ಮುಂದಾಗಿದ್ದಾರ ಎಂಬ ಪ್ರಶ್ನೆಗಳು ತೀವ್ರ ಕುತೂಹಲ ಮೂಡಿಸಿದೆ. ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿರುವುದು ಸರ್ಕಾರ ಮೇಲೆ ಯಾವ ಪರಿಣಾಮ ಉಂಟು ಮಾಡಲಿದೆ ಎಂಬುವುದು ಕಾದುನೋಡಬೇಕಿದೆ.