ಸಿದ್ದಾರ್ಥ್ ಅವರ ಸಾವು ಅಪಾರ ನೋವು ತಂದಿದೆ: ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ
ಬೆಂಗಳೂರು: ಉದ್ಯಮಿ ಸಿದ್ದಾರ್ಥ್ ಅವರು ದುಡುಕಿ ಬಿಟ್ಟರು. ಅವರ ಸಾವು ತೀವ್ರ ಆಘಾತ ಹಾಗೂ ಅಪಾರ ನೋವು ತಂದಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಎಸ್ವೈ, ಮೀನುಗಾರರ ಪರಿಶ್ರಮದಿಂದ ಸಿದ್ಧಾರ್ಥ್ ಅವರ ಮೃತದೇಹ ಸಿಕ್ಕಿದೆ. ಎಸ್.ಎಂ ಕೃಷ್ಣ ಕುಟುಂಬದವರಿಗೆ, ಸಿದ್ಧಾರ್ಥ್ ಅವರ ಕುಟುಂಬಕ್ಕೆ ಸಾಂತ್ವಾನ ಹೇಳೋಕೆ ಶಬ್ಧಗಳೇ ಸಿಗುತ್ತಿಲ್ಲ. ಮಂಗಳವಾರ ಎಸ್.ಎಂ ಕೃಷ್ಣ ಅವರ ಮನೆಗೆ ಹೋಗಿ ಅವರ ಶ್ರೀಮತಿಗೆ ಸಾಂತ್ವಾನ ಹೇಳಿ ಬಂದಿದ್ದೆ ಎಂದರು.
ದೇವರ ದಯೆಯಿಂದ ಇಂದು ಸಿದ್ಧಾರ್ಥ್ ಪಾರ್ಥಿವ ಶರೀರ ಸಿಕ್ಕಿದೆ. ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಿ ಅಂತ್ಯಕ್ರಿಯೆ ನಡೆಯುತ್ತೆ ಅಲ್ಲಿ ಹೋಗಿ ಭಾಗವಹಿಸುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯ ಎಂದರು.
ಒಬ್ಬ ಆಗರ್ಭ ಶ್ರೀಮಂತ, ಕಾಫಿ ಡೇ ಇಡೀ ಪ್ರಪಂಚಕ್ಕೆ ಪರಿಚಯಿಸಿದವರು ದುಡುಕಿಬಿಟ್ಟರು. ಆ ಸಂದರ್ಭದಲ್ಲಿ ಅವರ ಜೊತೆ ಯಾರಾದರೂ ಒಬ್ಬರು ಇದ್ದರೂ ಈ ಘಟನೆ ನಡೆಯುತ್ತಿರಲಿಲ್ಲ. ಮಳೆ ಬಂದರೂ ಅವರು ಅವರು ವಾಕಿಂಗ್ ಹೋಗಿ ತಮ್ಮ ಡ್ರೈವರ್ ಗೆ ಇಲ್ಲಿಯೇ ಇರು ಎಂದು ಹೇಳಿ ನದಿಗೆ ಹಾರಿದ್ದಾರೆ. ಇಂತಹ ದಾರುಣ ಘಟನೆ ನಡೆದಿದೆ. ರಾಜ್ಯ ಮುಖ್ಯಮಂತ್ರಿಯಾಗಿ ಆ ಕುಟುಂಬದವರಿಗೆ ಈ ಧೈರ್ಯವನ್ನು ಸಹಿಸುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.