ಸರಕಾರಿ ಅಧಿಕಾರಿಗಳ ಬಸ್ ಪ್ರಯಾಣ
ಉಡುಪಿ- ಜಿಲ್ಲೆಯಲ್ಲಿ ಗುರುವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಯಾವ ಅಧಿಕಾರಿಯು ಸರಕಾರಿ ಕಾರು ಏರಬಾರದೆಂದು ಉಡುಪಿ ಜಿಲ್ಲಾಧಿಕಾರಿ ಡಿಸಿ ಹೆಬ್ಸಿಬಾ ರಾಣಿ ಆದೇಶಿಸಿದ್ದಾರೆ
ಸರಕಾರಿ ಅಧಿಕಾರಿಗಳು ಎಂದರೆ ಕಾರಿನಲ್ಲಿಯೇ ಓಡಾಟ ಕಾರಿನಲ್ಲಿಯೇ ತಿರುಗಾಟ ಮಾಡುತ್ತಾರೆ ಎನ್ನುವ ವಿಚಾರ ನಮಗೆ ತಿಳಿದಿರುವಂತದ್ದು. ಆದರೆ ಉಡುಪಿ ಡಿಸಿ ಹೆಬ್ಸಿಬಾ ರಾಣಿ ಮತ್ತು ಅವರ ಕಛೇರಿಯ ಅಧಿಕಾರಿಗಳು ಮಾತ್ರ ಗುರುವಾರದಂದು ಮಾತ್ರ ಕಾರು ಏರಿ ಕಛೇರಿಗೆ ಬರುವುದಿಲ್ಲ. ಇದಕ್ಕೆ ಕಾರಣ ಇಷ್ಟೆ ಪರಿಸರ ಪ್ರೇಮಿಯಾಗಿರುವ ಉಡುಪಿ ಡಿಸಿ ಹೆಪ್ಸಿಬಾ ರಾಣಿ ಸಾರ್ವಜನಿಕ ಸಾರಿಗೆ ಸೇವೆಯ ಬಳಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳೆಲ್ಲಾ ಪ್ರತಿ ಗುರುವಾರ ಬಸ್ಸಿನಲ್ಲಿ ಓಡಾಡಬೇಕು ಎಂದು ಹೊಸ ಆದೇಶವನ್ನು ನೀಡಿದ್ದಾರೆ. ಅಷ್ಟೆ ಆಲ್ಲದೇ ಸ್ವತಃ ಖುದ್ದಾಗಿ ಪ್ರತಿ ಗುರುವಾರ ಉಡುಪಿಯ ತಮ್ಮ ನಿವಾಸದಿಂದ ಕಛೇರಿಗೆ ಬಸ್ಸಿನಲ್ಲಿಯೇ ತೆರಳುತ್ತಿದ್ದಾರೆ. ಡಿಸಿ ಅವರ ಸರಕಾರಿ ನಿವಾಸದ ಅಕ್ಕಪಕ್ಕದಲ್ಲಿಯೇ ಇರುವ ಜಿಲ್ಲಾಧಿಕಾರಿ ಕಛೇರಿಯ ಇತರ ಅಧಿಕಾರಿಗಳು ಈ ವಿಚಾರದಲ್ಲಿ ಸಾಥ್ ನೀಡುತ್ತಿದ್ದು, ಸರಕಾರ ನೀಡಿದ ವಾಹನವನ್ನು ಬಿಟ್ಟು ಎಲ್ಲರೂ ಒಟ್ಟಾಗಿ ಸರಕಾರಿ ಬಸ್ಸ ನಲ್ಲಿ ಮಣಿಪಾಲದ ರಜತಾದ್ರಿಯಲ್ಲಿನ ತಮ್ಮ ಕಛೇರಿಗೆ ಬಂದು ಕರ್ತವ್ಯ ಮಾಡುತ್ತಿದ್ದಾರೆ. ಬಳಿಕ ಸಂಜೆ ಆಫೀಸ್ ಮುಗಿದ ಬಳಿಕವು ಅದೇ ಬಸ್ನ ಮೂಲಕವೇ ತಮ್ಮ ನಿವಾಸಕ್ಕೆ ತೆರಳುತ್ತಾರೆ.
ವರ್ಷದಿಂದ ವರ್ಷಕ್ಕೆ ಜನರಲ್ಲಿ ಪರಿಸರದ ಕಾಳಜಿ ಜಾಸ್ತಿಯಾಗುತ್ತಿದೆ. ಆದರೆ ಪರಿಸರ ಮಾಲಿನ್ಯ ಮಾತ್ರ ಕಮ್ಮಿ ಆಗುತ್ತಿಲ್ಲ. ನಗರಗಳಲ್ಲಿ ವಾಹನ ದಟ್ಟಣೆಯೇ ಇದಕ್ಕೆ ನೇರ ಕಾರಣ, ಹೇಗಾದರೂ ಮಾಡಿ ಪರಿಸರ ಮಾಲಿನ್ಯ ಕಡಿಮೆ ಮಾಡಲು ಉಡುಪಿ ಡಿಸಿ ಪಣ ತೊಟ್ಟಿದ್ದಾರೆ. ಸದ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಇದನ್ನು ಪಾಲಿಸುತ್ತಿದ್ದಾರೆ. ಪ್ರತೀ ಗುರುವಾರ ಬಸ್ ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತದೆ. ನಗರದ ಪ್ರಮುಖ ಜಂಕ್ಷನ್ಗಳಲ್ಲಿ ಸರ್ಕಾರಿ ನೌಕರರರು ಈ ಬಸ್ಸಿಗಾಗಿ ಕಾಯುತ್ತಿರಬೇಕು. ಬಸ್ ಬಂದ ಕೂಡಲೇ ಹತ್ತಿಕೊಂಡು ಜಿಲ್ಲಾಧಿಕಾರಿ ಕಚೇರಿ ಸೇರಬೇಕು ಎಂದು ಆದೇಶ ನೀಡಿದ್ದಾರೆ. ರಸ್ತೆಯಲ್ಲಿ ವಾಹನದಟ್ಟಣೆ ಕಡಿಮೆಯಾದರೆ ಅಟೋಮ್ಯಾಟಿಕ್ ಆಗಿ ಪರಿಸರ ಮಾಲಿನ್ಯ ಕಡಿಮೆ ಆಗುತ್ತದೆ. ಮಾಲಿನ್ಯ ಕಡಿಮೆ ಆದರೆ ನಮ್ಮದೇ ಆರೋಗ್ಯ ಚೆನ್ನಾಗಿರುತ್ತದೆ. ಸಮಸ್ಯೆಯೂ ನಮ್ಮಿಂದನೇ ಆಗುತ್ತಿದೆ ಅದಕ್ಕೆ ನಾವೇ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ಡಿಸಿ ಅವರ ಅಭಿಪ್ರಾಯವಾಗಿದೆ.