ಬಿ.ಎಸ್.ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ: ಸಿದ್ದರಾಮಯ್ಯ
ಕೊಳ್ಳೇಗಾಲ: ‘ನೆರೆಯಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರದಿಂದ ಪರಿಹಾರ ಕೊಡಿಸಲು ಸರ್ಕಾರ ವಿಫಲವಾಗಿದ್ದು, ಬಿ.ಎಸ್.ಯಡಿಯೂರಪ್ಪ ಅವರು ಅತ್ಯಂತ ದುರ್ಬಲ ಮುಖ್ಯಮಂತ್ರಿ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಡವರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ರಾಜ್ಯದಲ್ಲಿ ಪ್ರವಾಹ ಬಂದು ಒಂದು ಕಾಲು ಲಕ್ಷ ಜನರು ನಿರ್ಗತಿಕರಾಗಿದ್ದಾರೆ. ನೆರೆಯಿಂದ 88 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹ ಇಳಿದು 45 ದಿನ ಕಳೆದರೂ ಕೇಂದ್ರದಿಂದ ಒಂದು ರೂಪಾಯಿ ಪರಿಹಾರ ಬಂದಿಲ್ಲ. ಹೀಗಾದರೆ ರಾಜ್ಯದ ಗತಿ ಏನು’ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿದ್ರೆ ಮಾಡದೆ ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಿಸಲಿ. ಸಾಧ್ಯವಾಗದೆ ಇದ್ದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ’ ಎಂದು ಸವಾಲು ಹಾಕಿದರು.
ಮೋದಿ ಅವರು ಉದ್ದುದ್ದ ಭಾಷಣ ಮಾಡುವುದರಲ್ಲಿ ನಂ. 1 ಹಾಗೂ ವಿದೇಶ ತಿರುಗುವುದೆ ಆಡಳಿತ ಎಂದುಕೊಂಡಿದ್ದಾರೆ. ರಾಜ್ಯದಲ್ಲಿ ಗೆದ್ದಿರುವ ಬಿಜೆಪಿಯ 25 ಸಂಸದರು ಕೂಡ ಮೋದಿ ಮುಂದೆ ಕೂತು ಅನುದಾನ ಬಿಡುಗಡೆ ಮಾಡಿಸುವುದಕ್ಕೆ ವಿಫಲರಾಗಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದರೆ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಿ ಕೇಂದ್ರವನ್ನೇ ಗಬ್ಬೆಬ್ಬಿಸಿ ಬಿಡುತ್ತಿದೆ. ರಾಜ್ಯದಲ್ಲಿ ಬರ ಬಂದಾಗ ಮೂರು ಬಾರಿ ನಿಯೋಗ ಕರೆದುಕೊಂಡು ಹೋಗಿದ್ದೆ’ ಎಂದರು.