ಬ್ರಹ್ಮಾವರ:ಅರಣ್ಯ ಕೃಷಿ ಬಗ್ಗೆ ತರಬೇತಿ ಕಾರ್ಯಕ್ರಮ

ಉಡುಪಿ, ಅಗಸ್ಟ್ : ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದಲ್ಲಿ ಶುಕ್ರವಾರ ದಿ.ಕೆ.ಎಂ. ಉಡುಪ ಸ್ಮರಣಾರ್ಥವಾಗಿ ಅರಣ್ಯ ಕೃಷಿ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕೊಡಗು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ರಾಮಕೃಷ್ಣ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಈಗಿನ ಯುವಕರು ಕೃಷಿ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ, ಅರಣ್ಯದಲ್ಲಿ ಕೃಷಿ ಮಾಡಬಹುದಾ ಅಥವಾ ಕೃಷಿ ಭೂಮಿಯಲ್ಲಿ ಅರಣ್ಯ ವೃಕ್ಷಗಳನ್ನು ಬೆಳೆಸಬಹುದಾ ಎನ್ನುವುದರ ಕುರಿತು ಚರ್ಚಿಸಿದರು ಮತ್ತು ಮನುಷ್ಯನ ಬೇಡಿಕೆಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಪರಿಸರ ಹಾಳಾಗುತ್ತಿದೆ ಎನ್ನುವುದರ ಕುರಿತು ಮನವಿ ಮಾಡಿದರು.

 ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ಮತ್ತು ಸಹ ಸಂಶೋಧನಾ ನಿರ್ದೇಶಕ ಡಾ. ಎಸ್. ಯು. ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರಣ್ಯ ನಾಶದಿಂದ ಕಾಡು ಪ್ರಾಣಿಗಳಿಗೂ ಆಹಾರ ಕೊರತೆಯಾಗಿದೆ, ಮನುಷ್ಯನು ಕಾಡನ್ನು ನಾಶ ಮಾಡಿರುವುದರಿಂದ ಕಾಡು ಪ್ರಾಣಿಗಳು ನಾಡಿಗೆ ಬಂದು ವಾಸಿಸಲು ಪ್ರಾರಂಭಿಸಿದವು ಎಂದು ತಿಳಿಸಿದರು. ಅರಣ್ಯ ಕೃಷಿ ಬಗ್ಗೆ ವಿಷಯವನ್ನು ಮನನ ಮಾಡಿಕೊಂಡು ಅರಣ್ಯ ಬೆಳೆಸುವ ಅವಶ್ಯಕತೆ ಇದೆ ಎಂದು ತಿಳಿಸಿದರು. ಕೆ.ಎಂ. ಉಡುಪರು ನೇರವಾಗಿ, ದಿಟ್ಟವಾಗಿ ಮಾತನಾಡುವವರು ಹಾಗೂ ಅವರು ವಿಚಾರವನ್ನು ರೈತರಿಗೆ ಮನವರಿಕೆ ಮಾಡುವಂತಹ ದಿಟ್ಟ ವ್ಯಕ್ತಿತ್ವ ಹೊಂದಿದವರು ಎಂದು ತಿಳಿಸಿದರು. 


 ಮುಖ್ಯ ಅತಿಥಿಗಳಾಗಿ ಮಣಿಪಾಲ ಭಾರತೀಯ ವಿಕಾಸ್ ಟ್ರಸ್ಟ್‌ನ ಆಡಳಿತ ಅಧಿಕಾರಿ ಐ.ಜಿ ಕಿಣಿ ಮಾತನಾಡಿ, ಕೆ.ಎಂ. ಉಡುಪರವರ ವಿಚಾರದಾರೆಯನ್ನು ಮುನ್ನೆಡಸಲು ಒಂದು ಕೇಂದ್ರವನ್ನು ಸ್ಥಾಪಿಸುತ್ತಿದ್ದೇವೆ. ಹಲವಾರು ಶಾಲೆಗಳಲ್ಲಿ, ಕ್ಲಬ್‌ಗಳಲ್ಲಿ ಮಾಹಿತಿ ನೀಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಉಡುಪರ ನೇತೃತ್ವದಲ್ಲಿ ೬೦೦ ಗೊಬ್ಬರ್ ಗ್ಯಾಸ್‌ಗಳನ್ನು ನೀಡಿದ್ದೇವೆ, ಸೋಲಾರ್ ಪ್ರಚಾರದಲ್ಲಿ ನಮ್ಮ ಸಂಸ್ಥೆ ಉತ್ತಮ ಸ್ಥಾನದಲ್ಲಿದೆ ಹಾಗೂ ಕೃಷಿಕರನ್ನು ಆರ್ಥಿಕವಾಗಿ ಮುನ್ನಡೆಸುವ ಬಗ್ಗೆ ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾ ವಿದ್ಯಾಲಯ ಪ್ರಾಂಶುಪಾಲ ಡಾ. ಸುಧೀರ ಕಾಮತ್ ಮಾತನಾಡಿ, ನಾವು ಪರಿಸರಕ್ಕೆ ಮಾಡಿದ ಅನ್ಯಾಯವೇ ನಮಗೆ ತಿರುಗೇಟು ಕೊಡುತ್ತಿದೆ. ಅರಣ್ಯ ಪ್ರದೇಶಗಳು ನಶಿಸಿ ಹೋಗುತ್ತಿದೆ. ವಾಯು ಮಾಲಿನ್ಯವಾಗುತ್ತಿದೆ. ಮನುಷ್ಯನ ಸ್ವಾರ್ಥಕ್ಕೋಸ್ಕರ ಅರಣ್ಯ ನಾಶವಾಗುತ್ತಿದೆ. ಇನ್ನು ಮನುಷ್ಯನಿಗೆ ಸಿಲಿಂಡರ್ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಬರಬಹುದು, 33% ಅರಣ್ಯ ಬೇಕು ಆದರೆ ನಮ್ಮಲ್ಲಿ 16% ಮಾತ್ರ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ರವೀಂದ್ರ ಪಿ. ಆಚಾರ್ಯ ಉಪಸ್ಥಿತರಿದ್ದರು. ಕೆ.ವಿ.ಕೆ, ಬ್ರಹ್ಮಾವರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ  ಡಾ. ಬಿ. ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೆ.ವಿ.ಕೆ, ಬ್ರಹ್ಮಾವರದ ವಿಜ್ಞಾನಿ (ಬೇಸಾಯ ಶಾಸ್ತ್ರ) ಡಾ. ಎನ್. ಈ. ನವೀನ್ ನಿರೂಪಿಸಿದರು. ಕೆ.ವಿ.ಕೆ, ಬ್ರಹ್ಮಾವರದ ವಿಜ್ಞಾನಿ (ತೋಟಗಾರಿಕೆ) ಚೈತನ್ಯ ಹೆಚ್. ಎಸ್. ವಂದಿಸಿದರು. 

Leave a Reply

Your email address will not be published. Required fields are marked *

error: Content is protected !!