ಯುವ ಜನತೆ ರಕ್ತದಾನ ಮಾಡಲು ಮುಂದಾಗಬೇಕು : ಬಸ್ರೂರು ರಾಜೀವ್ ಶೆಟ್ಟಿ

 ಉಡುಪಿ: ರಕ್ತದಾನದ ಮಾಡುವ ಮೂಲಕ ಯಾವುದೇ ಖರ್ಚು ಇಲ್ಲದೇ ಜನರ ಪ್ರಾಣವನ್ನು ಉಳಿಸಬಹುದು. ಆದ್ದರಿಂದ ಯುವ ಜನತೆ ರಕ್ತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮ್ಯಾನೆಜಿಂಗ್ ಕಮಿಟಿ ಮೆಂಬರ್ ಬಸ್ರೂರು ರಾಜೀವ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಘಟಕದ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಂಗಣದಲ್ಲಿ ನಡೆದ ರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 

 ಹಲವಾರು ಜಾತಿ ಧರ್ಮಗಳು ಇದ್ದರೂ, ರಕ್ತಕ್ಕೆ ಯಾವುದೇ ದೇಶದ ಗಡಿ, ಧರ್ಮದ ಹಂಗಿಲ್ಲ. ಆರೋಗ್ಯವಂತ ಒಬ್ಬ ವ್ಯಕ್ತಿ  ರಕ್ತದಾನದ ಮೂಲಕ  ತನ್ನ ಜೀವಿತಾವಧಿಯಲ್ಲಿ ೫೦೦ಕ್ಕೂ ಅಧಿಕ ಜನರ ಪ್ರಾಣವನ್ನು ಉಳಿಸಬಹುದು. ರಕ್ತದಿಂದ ಜೀವ ಉಳಿಸಲು ಸಾಧ್ಯವಿರುವುದರಿಂದ ರಕ್ತದಾನ ಮಾಡುವುದು ದೈವತ್ವಕ್ಕೆ ಸಮಾನವಾದ ಕಾರ್ಯವಾಗಿದೆ. ರಕ್ತಕ್ಕೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ ದೇವರ ಸೇವೆಯಷ್ಟೇ ಪುಣ್ಯ ಪಡೆಯಬಹುದು. ರಕ್ತದಾನದಿಂದ ಆರೋಗ್ಯ ವೃದ್ಧಿ ಯಾಗುತ್ತದೆ. ರಕ್ತದಾನ ಮಾಡಿದಷ್ಟು ದೇಹದಲ್ಲಿ ರಕ್ತ ಉತ್ಪತ್ತಿಯಾಗುತ್ತದೆ. ರಕ್ತದಾನದಿಂದ ಯಾವುದೇ ರೀತಿ ಸಮಸ್ಯೆಯಾಗುವುದಿಲ್ಲ. ಯುವಕರು ರಕ್ತದಾನ ಮಾಡುವ ಕಡೆಗೆ ಒಲವು ತೋರಬೇಕು ಎಂದು ಹೇಳಿದರು.

 ಅಧ್ಯಕ್ಷತೆಯನ್ನು ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಉಮೇಶ್ ಪ್ರಭು ಮಾತನಾಡಿ, ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಮೂಲಕ ರಕ್ತದಾನದ ಬಗ್ಗೆ ಇರುವ ಅಪನಂಬಿಕೆಗಳನ್ನು ಹೋಗಲಾಡಿಸಿ, ಯುವ ಜನತೆಯನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು. ಇಂತಹ ಕಾರ್ಯಕ್ರಮದಲ್ಲಿ ರಕ್ತದಾನಿಗಳನ್ನು ಸನ್ಮಾನಿಸುವುದರಿಂದ ಇತರರಿಗೆ ಮಾದರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತವಾಗಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ , ಶ್ರೀನಿವಾಸ ರಾವ್ ಕೆ. ಕೋಟಾ(75ಬಾರಿ) ರಾಘವೇಂದ್ರ ಪೈ ಗಂಗೊಳ್ಳಿ(57ಬಾರಿ) ಅಜ್ಮಲ್ ಅಸಾದಿ ಬ್ರಹ್ಮಾವರ (57 ಬಾರಿ )ಅಕ್ಬರ್ ಅಲಿ ಆತ್ರಾಡಿ( 35 ಬಾರಿ) ಹರೀಶ್ ಕೋಟ್ಯಾನ್ ಸಂತೆಕಟ್ಟೆ (26 ಬಾರಿ) ಪರಶುರಾಮ್ ಅಚಾರ್ಯ ಬಡಗುಬೆಟ್ಟು (25 ಬಾರಿ) ಅವರನ್ನು ಸನ್ಮಾನಿಸಲಾಯಿತು.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮ್ಯಾನೆಜಿಂಗ್ ಕಮಿಟಿ ಮೆಂಬರ್ ಬಸ್ರೂರು ರಾಜೀವ್ ಶೆಟ್ಟಿ ವಿದ್ಯಾರ್ಥಿಗಳಿಗೆ ರಕ್ತದಾನದ ಪ್ರತಿಜ್ಞಾವಿಧಿ ಭೋಧಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಬಾಲ ಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!