ಬಿಜೆಪಿಯು ಡಿ.ಕೆ. ಶಿವಕುಮಾರ್ ಅವರಿಗೆ ಗಾಳ ಹಾಕಿತ್ತು: ಸಿದ್ದರಾಮಯ್ಯ
ಮೈಸೂರು: ಪಕ್ಷಕ್ಕೆ ಬರುವಂತೆ ಬಿಜೆಪಿಯು ಡಿ.ಕೆ.ಶಿವಕುಮಾರ್ ಅವರಿಗೆ ಗಾಳ ಹಾಕಿತ್ತು. ಇವರ ಮೇಲಿದ್ದ ಪ್ರಕರಣವನ್ನು ಕೈಬಿಡುವ ಆಮಿಷವನ್ನೂ ಒಡ್ಡಿತ್ತು. ಇದಕ್ಕೆ ಸೊಪ್ಪು ಹಾಕದ್ದಕ್ಕೆ ಬಂಧಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಇಲ್ಲಿನ ಮಹಾತ್ಮ ಗಾಂಧಿ ಚೌಕದಲ್ಲಿ ಬುಧವಾರ ಕಾಂಗ್ರೆಸ್ ವತಿಯಿಂದ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಸ್ವತಃ ಡಿ.ಕೆ.ಶಿವಕುಮಾರ್ ಅವರೇ ನನ್ನ ಜತೆ ಈ ಮಾತನ್ನು ಹೇಳಿದ್ದರು. ಬಿಜೆಪಿ ಇದೇ ಬಗೆಯ ‘ಬ್ಲಾಕ್‌ಮೇಲ್’ ತಂತ್ರ ಅನುಸರಿಸಿ ಕಾಂಗ್ರೆಸ್‌ನ ಇತರ ಶಾಸಕರನ್ನು ತನ್ನತ್ತ ಸೆಳೆದುಕೊಂಡಿದೆ’ ಎಂದು ಕಿಡಿಕಾರಿದರು.
‘ಬ್ಲಾಕ್‌ಮೇಲ್’ಗೆ ಬಗ್ಗದವರಿಗೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳೆಂಬ ಗುಮ್ಮಗಳನ್ನು ಬಿಡುವ ಮೂಲಕ ಹೆದರಿಸುತ್ತಿದೆ. ಇದರ ಜತೆಗೆ, ಗುಜರಾತಿನ ಕಾಂಗ್ರೆಸ್ ಶಾಸಕರಿಗೆ ರಕ್ಷಣೆಗೆ ಕೊಟ್ಟಿದ್ದಕ್ಕೆ ಡಿ.ಕೆ.ಶಿವಕುಮಾರ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ಚಿದಂಬರಂ ಮೇಲೂ ಇದೇ ಬಗೆಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಆದರೆ, ಕಾಂಗ್ರೆಸ್ ಇಂತಹ ಬ್ಲಾಕ್‌ಮೇಲ್ ಹಾಗೂ ಬೆದರಿಕೆ ತಂತ್ರಗಳಿಗೆ ಬಗ್ಗುವುದಿಲ್ಲ ಎಂದು ಹೇಳಿದರು