ಇಂದು ರಾಮನಗರ ಬಂದ್,ಕನಕಪುರದಲ್ಲಿ ಲಾಠಿ ಚಾರ್ಜ್


ರಾಮನಗರ: ಇಂದು ರಾಮನಗರ ಬಂದ್‍ಗೆ ಜಿಲ್ಲಾ ಕಾಂಗ್ರೆಸ್ ಕರೆ ನೀಡಿದೆ. ರಾಮನಗರದಲ್ಲಿ ಬೆಳಗ್ಗೆ 9 ಗಂಟೆಗೆ ಕಾಂಗ್ರೆಸ್ ಕಚೇರಿಯ ಬಳಿ ಪ್ರತಿಭಟನೆ ನಡೆಸಿ ಐಜೂರು ವೃತ್ತದವರೆಗೂ ಮೆರವಣಿಗೆ ಮಾಡಿ ಎಂಎಲ್‍ಸಿ ಸಿಎಂ ಲಿಂಗಪ್ಪ, ಮಾಜಿ ಶಾಸಕ ಎಚ್ ಸಿ ಬಾಲಕೃಷ್ಣ ನೇತೃತ್ವದಲ್ಲಿ ಪ್ರತಿಭಟಿಸಲಿದ್ದಾರೆ.

ನಂತರ ಬೈಕ್ ರ‍್ಯಾಲಿ ನಡೆಸಿ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರು 11 ಗಂಟೆಗೆ ಪ್ರತಿಭಟಿಸಲಿದ್ದಾರೆ. ಕನಕಪುರದ ಕಾಂಗ್ರೆಸ್ ಕಚೇರಿಯ ಬಳಿ, ಚನ್ನಪಟ್ಟಣದ ಕಾಂಗ್ರೆಸ್ ಕಚೇರಿ ಹಾಗೂ ಹೆದ್ದಾರಿಯಲ್ಲಿ, ಮಾಗಡಿಯ ಕಲ್ಯಾ ಗೇಟ್ ಬಳಿಯೂ ಕಾಂಗ್ರೆಸ್ ಕಾರ್ಯಕರ್ತರು, ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಬೆಳಗ್ಗೆ 9 ಗಂಟೆಗೆ ಪ್ರತಿಭಟನೆ ನಡೆಸಲಿದ್ದಾರೆ. ಡಿಕೆಶಿ ಸ್ವಗ್ರಾಮ ದೊಡ್ಡ ಆಲಹಳ್ಳಿ, ಕೋಡಿಹಳ್ಳಿ, ಸಾತನೂರಿನಲ್ಲೂ ಪ್ರತಿಭಟನೆ ನಡೆಸಲಿದ್ದಾರೆ. ಬಿಡದಿಯಲ್ಲೂ ಕೂಡ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಿದ್ದಾರೆ.

ಡಿಕೆಶಿಯನ್ನು ಇಡಿ ಕಸ್ಟಡಿಗೆ ಒಪ್ಪಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಡಿಕೆ ಅಭಿಮಾನಿಗಳು ನಿನ್ನೆ ರಾತ್ರಿ ರಾಮನಗರದ ಕನಕಪುರದ ಚನ್ನಬಸಪ್ಪ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ರಸ್ತೆ ತಡೆದು ಪ್ರತಿಭಟಿಸಿದರು. ಬಂದ್… ಬಂದ್… ಕನಕಪುರ ಬಂದ್ ಎಂದು ಘೋಷಣೆಗಳನ್ನ ಕೂಗಿ ರೋಷಾವೇಶ ಹೊರಹಾಕಿದರು.

ಕನಕಪುರದಲ್ಲಿ ಗುಂಪು ಗುಂಪಾಗಿ ನಿಂತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ನಂತರ ಕನಕಪುರ – ರಾಮನಗರದಲ್ಲಿ ಸಹಜ ಸ್ಥಿತಿಯತ್ತ ಬಂದರೂ ಅಲ್ಲಲ್ಲಿ ಇಂದಿನ ಪ್ರತಿಭಟನೆ ರೂಪುರೇಷೆಗಳ ಬಗ್ಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಚರ್ಚೆ ನಡೆಸಿದ್ದಾರೆ. ಈ ಮಧ್ಯೆ ರಾಮನಗರ, ಕನಕಪುರದಲ್ಲಿ ಸಾಕಷ್ಟು ಬಿಗಿಭದ್ರತೆ ಕೈಗೊಳ್ಳಲಾಗಿದೆ.

ರಾಮನಗರದಲ್ಲಿ ಓರ್ವ ಎಸ್ಪಿ, ಇಬ್ಬರು ಡಿವೈಎಸ್ಪಿ, ಮೂವರು ಸರ್ಕಲ್ ಇನ್ಸ್ ಪೆಕ್ಟರ್, ಎರಡು ಡಿಆರ್, ಒಂದು ಕೆಎಸ್‍ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಎಸ್ ಪಿ ಅನುಪಮ್ ಅಗರ್ವಾಲ್, ಎಎಸ್‍ಪಿ ಸುಜಿತ್ ಕನಕಪುರದಲ್ಲಿ ಹಾಗೂ ರಾಮನಗರದಲ್ಲಿ ಎಸ್‍ಪಿ ಅನೂಪ್ ಶೆಟ್ಟಿ ಮೊಕ್ಕಾಂ ಹೂಡಿದ್ದಾರೆ.

ರಾಮನಗರ ಜಿಲ್ಲೆಯ ಡಿಸಿ ಅರ್ಚನಾ ಶಾಲಾ ಕಾಲೇಜಿಗೆ ಇಂದು ಕೂಡ ಸರ್ಕಾರಿ, ಖಾಸಗಿ ಶಾಲೆ ಕಾಲೇಜ್‍ಗೆ ರಜೆ ಘೋಷಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!