ಭಗವದ್ಗೀತೆ ಅಧ್ಯಾಯ – 01 : ಶ್ಲೋಕ – 02

ಸಂಜಯ ಉವಾಚ ।
ದೃಷ್ಟ್ವಾ ತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ।
ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ ॥೨॥
ಸಂಜಯ ಉವಾಚ- ಸಂಜಯ ಹೇಳುತ್ತಾನೆ:
ದೃಷ್ಟ್ವಾ ತು ಪಾಂಡವ ಅನೀಕಮ್ ವ್ಯೂಢಮ್ ದುರ್ಯೋಧನಃ ತದಾ
ಆಚಾರ್ಯಮ್ ಉಪಸಂಗಮ್ಯ ರಾಜಾ ವಚನಮ್ ಅಬ್ರವೀತ್- ಆಗ ದೊರೆಯಾದ ದುರ್ಯೋಧನ ಸಜ್ಜುಗೊಂಡ ಪಾಂಡವ ಪಡೆಯನ್ನು ಕಂಡು, ಆಚಾರ್ಯನತ್ತ ನಡೆದು ಮಾತನಾಡಿದನು.

ಈ ಶ್ಲೋಕವನ್ನು ವಿಶ್ಲೇಷಿಸುವ ಮೊದಲು ಇಲ್ಲಿ ಬಂದಿರುವ ‘ಅನೀಕ’ ಎನ್ನುವ ಪದದ ಅರ್ಥವನ್ನು ಸ್ವಲ್ಪ ತಿಳಿದುಕೊಳ್ಳೋಣ. ನಿಮಗೆ ತಿಳಿದಂತೆ ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡಿದ್ದು ಹದಿನೆಂಟು ಅಕ್ಷೋಹಿಣಿ ಸೈನ್ಯ. ಅದರಲ್ಲಿ ಏಳು ಅಕ್ಷೋಹಿಣಿ ಪಾಂಡವರ ಕಡೆ ಹೋರಾಟ ಮಾಡಿದರೆ ಉಳಿದ ಸೈನ್ಯ ಕೌರವನ ಕಡೆಯದು. ಇಲ್ಲಿ ಅಕ್ಷೋಹಿಣಿ ಎನ್ನುವುದು ಸೇನೆಯ ಅತಿದೊಡ್ಡ ವಿಭಾಗ. ಹಿಂದಿನ ಕಾಲದಲ್ಲಿ ಸೇನೆಯನ್ನು ಒಂಬತ್ತು ವಿಭಾಗಗಳಾಗಿ ವಿಂಗಡಿಸುತ್ತಿದ್ದರು. ಅವುಗಳೆಂದರೆ:
(೧) ಪತ್ತಿ: ಒಂದು ಆನೆ; ಒಂದು ರಥ; ಮೂರು ಕುದುರೆ ಹಾಗು ಐದು ಕಾಲಾಳುಗಳ ಒಂದು ತುಕಡಿ.
(೨) ಸೇನಾಮುಖ: ಮೂರು ಪತ್ತಿ
(೩) ಗುಲ್ಮ: ಮೂರು ಸೇನಾ ಮುಖ
(೪) ಗಣ : ಮೂರು ಗುಲ್ಮ
(೫) ವಾಹಿನಿ : ಮೂರು ಗಣ
(೬) ಪೃತನಾ: ಮೂರು ವಾಹಿನಿ
(೭) ಚಮೂ: ಮೂರು ಪೃತನಾ
(೮) ಅನೀಕಿನಿ: ಮೂರು ಚಮೂ
(೯) ಅಕ್ಷೋಹಿಣಿ: ಹತ್ತು ಅನೀಕಿನಿ- ಅಂದರೆ 21870 ಆನೆಗಳು, 21870 ರಥ, 65610 ಕುದುರೆಗಳು, 1,09,350 ಕಾಲಾಳುಗಳು. (ಇಲ್ಲಿರುವ ಸಂಖ್ಯಾ ಚಮತ್ಕಾರವನ್ನು ಗಮನಿಸಿ: 2+1+8+7+0=18; 6+5+6+1+0=18; 1+0+9+3+5+0=18).

ಈ ಮೇಲಿನ ಲೆಕ್ಕಾಚಾರದಂತೆ ಒಂದು ಅನೀಕಿನಿ ಎಂದರೆ ಹತ್ತನೇ ಒಂದು ಅಕ್ಷೋಹಿಣಿ. ಅಂದರೆ 2187 ಆನೆಗಳು, 2187 ರಥ, 6561 ಕುದುರೆಗಳು, 1,09,35 ಕಾಲಾಳುಗಳು. ಇದು ಪಾಂಡವ ಸೇನೆಯ ಎಪ್ಪತ್ತನೇ ಒಂದು ಭಾಗ. ಯುದ್ಧ ಮಾಡುವಾಗ ಎಲ್ಲಾ ಹದಿನೆಂಟು ಅಕ್ಷೋಹಿಣಿ ಒಮ್ಮೆಗೆ ಸೇರಿ ಯುದ್ಧ ಮಾಡುವುದಿಲ್ಲ. ಒಂದು ತುಕಡಿ ಒಮ್ಮೆಗೆ ಒಂದು ನಿರ್ಧಿಷ್ಟ ವ್ಯೂಹ ರಚಿಸಿ ಹೋರಾಟ ಮಾಡುತ್ತಾರೆ.

ವಿಶಿಷ್ಟವಾದ ವಿನ್ಯಾಸದಿಂದ( ವ್ಯೂಢಂ) ಶಿಸ್ತುಬದ್ಧವಾಗಿ ಸಜ್ಜಾಗಿ ನಿಂತ ಪಾಂಡವ ಸೇನೆಯ ಒಂದು ‘ಅನೀಕ’ ವನ್ನು ಕಂಡಾಗ ದುರ್ಯೋಧನನ ದುಗುಡ ಹೆಚ್ಚುತ್ತದೆ. ಇದು ಮಾನಸಿಕವಾಗಿ ಆತನಿಗಾಗುತ್ತಿರುವ ಮೊದಲ ಆಘಾತ. ಈ ಮಾನಸಿಕ ಸ್ಥಿತಿಯಲ್ಲಿ ಆತ ಆಚಾರ್ಯನ ಬಳಿ ಹೋಗುತ್ತಾನೆ. ಇಲ್ಲಿ ಆಚಾರ್ಯ ಅಂದರೆ ಗುರುಗಳಲ್ಲಿ ಹಿರಿಯರಾದ ದ್ರೋಣಾಚಾರ್ಯರು. ಅವರ ಬಳಿಗೆ ಹೋಗಿ ನಮಸ್ಕರಿಸಿ; ಶಿಷ್ಯನ ರೀತಿ ವರ್ತಿಸದೆ, ತಾನು ರಾಜ ಎನ್ನುವಂತೆ ಅಹಂಕಾರದಿಂದ ಆಡಬಾರದ ರೀತಿ ಮಾತನಾಡುತ್ತಾನೆ.

ಈ ಶ್ಲೋಕದಲ್ಲಿ ಮನಃಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ. ಯುದ್ಧ ಭೂಮಿಗೆ “ತಾನು ಗೆದ್ದೇ ಗೆಲ್ಲುತ್ತೇನೆ” ಎಂದು ಬಂದಿದ್ದ ದುರ್ಯೋಧನ,ಪಾಂಡವರ ಒಂದು ಅನೀಕವನ್ನು ನೋಡಿದಾಕ್ಷಣ ಮಾನಸಿಕ ಅಸಮತೋಲನ ಹೊಂದುತ್ತಾನೆ. ಅದರಿಂದ ಆತ ಹೇಗೆ ತಳಮಳಗೊಂಡ ಎನ್ನುವುದನ್ನು ಈ ಶ್ಲೋಕದಲ್ಲಿ ‘ದೃಷ್ಟ್ವಾತು(ಮೇಲಂತೂ)’ ಎನ್ನುವಲ್ಲಿ ಒತ್ತಿ ಹೇಳಿದ್ದಾರೆ. ತನ್ನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯ ಇದ್ದಾಗ್ಯೂ, ಪಾಂಡವರ ಒಂದು ಪುಟ್ಟ ಅನೀಕವನ್ನು ಕಂಡು ಮಾನಸಿಕವಾಗಿ ವಿಪ್ಲವನಾದ ದುರ್ಯೋಧನ, ಆಚಾರ್ಯ ದ್ರೋಣರಲ್ಲಿ ಹೋಗಿ ಹೇಗೆ ಅಹಂಕಾರದಿಂದ ಮಾತನಾಡಿದ ಎನ್ನುವುದು ಮುಂದಿನ ಶ್ಲೋಕ.

ಕಿಶೋರ್ ಕೆ ಅಂಬಾಗಿಲು

Leave a Reply

Your email address will not be published. Required fields are marked *

error: Content is protected !!