ಬಂಟ್ವಾಳ: ರಾಷ್ಟ್ರಮಟ್ಟದ ವಸ್ತು ಪ್ರದರ್ಶನಕ್ಕೆ ಆಯ್ಕೆ
ಬಂಟ್ವಾಳ : ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಎರಡು ದಿನ ನಡೆದ ಸಿ.ಬಿ.ಎಸ್.ಇ ಶಾಲೆಗಳ ರಾಜ್ಯಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನದಲ್ಲಿ ಬಂಟ್ವಾಳದ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯು ರಾಷ್ಟ್ರಮಟ್ಟದ ವಸ್ತುಪ್ರದರ್ಶನಕ್ಕೆ ಆಯ್ಕೆಯಾಗಿದೆ.
ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯು ವಿದ್ಯಾರ್ಥಿನಿಯರಾದ 7ನೇ ತರಗತಿಯ ರಿಯಾನ ಸೊನಾಲಿ ಪಿಂಟೋ ಮತ್ತು 8ನೇ ತರಗತಿಯ ತ್ರಿಷಾ ಪ್ರದರ್ಶಿಸಿದ ಆರೋಗ್ಯ ಮತ್ತು ಶುಚಿತ್ವ ವಿಭಾಗದ ‘ಕೇರ್ ಟೇಕರ್ ವಾಕಿಂಗ್ ಸ್ಟಿಕ್’ ಮಾದರಿಯು ದೆಹಲಿಯಲ್ಲಿ ನಡೆಯಲಿರುವ ರಾಷ್ಷ್ರಮಟ್ಟದ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
ಶಾಲಾ ಪ್ರಾಂಶುಪಾಲೆ ರಮಾಶಂಕರ್ ಅವರು ವಿದ್ಯಾರ್ಥಿನಿಯರ ಸಾಧನೆಯನ್ನು ಪ್ರಶಂಸಿಸಿ ಶುಭಹಾರೈಸಿದ್ದಾರೆ. ಇಂದಿನ ಆಧುನಿಕ ಶೈಲಿಯ ಮನೆಗಳಲ್ಲಿ ಟೈಲ್ಸ್ ಅಥವಾ ಗ್ರಾನೈಟ್‍ಗಳ ಮೇಲೆ ಬಿದ್ದಿರುವ ನೀರನ್ನು ಗುರುತಿಸಲು ಮತ್ತು ಉಂಟಾಗುವ ಅನಾಹುತಗಳನ್ನು ತಪ್ಪಿಸಲು, ವ್ಯಕ್ತಿಯನ್ನು ಜಾಗೃತಗೊಳಿಸಲು ಇದು ಸಹಕರಿಸುತ್ತದೆ. ಈ ವಾಕಿಂಗ್ ಸ್ಟಿಕ್‍ನ ತುದಿಭಾಗವು ನೀರಿನ ಸಂಪರ್ಕ ಪಡೆದೊಡನೇ ಶಬ್ದ ಉತ್ಪತ್ತಿ ಮಾಡುವುದರಿಂದ ಮುಂದಿನ ಅನಾಹುತಗಳನ್ನು ತಪ್ಪಿಸುತ್ತದೆ. ಪ್ರಯೋಗಾತ್ಮಕವಾಗಿ ವಿದ್ಯಾರ್ಥಿನಿಯರು ಇದನ್ನು ಪಾದರಕ್ಷೆಗಳಿಗೆ ಅಳವಡಿಸಿ ಪ್ರದರ್ಶಿಸಿದ್ದರು ಎಂದು ಅವರು ತಿಳಿಸಿದ್ದಾರೆ. ರಿಯಾನ ಸೊನಾಲಿ ಪಿಂಟೊ ಇವರ ತಂದೆ ರೋಷನ್ ಪಿಂಟೊ ಮಾದರಿ ತಯಾರಿಯಲ್ಲಿ ಸಹಕರಿಸಿ ಮಾರ್ಗದರ್ಶನ ನೀಡಿದ್ದರು. ಶಾಲಾ ಶಿಕ್ಷಕಿ ಕೇಶವತಿ ವಿದ್ಯಾರ್ಥಿನಿಯರ ಜೊತೆಗೆ ಅರ್ಹತಾ ಪತ್ರ ಸ್ವೀಕರಿಸಿದರು.