ಟೋಲ್‌ಗೇಟ್‌ಗೆ ಫಾಸ್ಟ್ ಟ್ಯಾಗ್ ಜನರ ಕಿಸೆಗೆ ಕತ್ತರಿ: ಜಿಲ್ಲಾ ಕಾಂಗ್ರೆಸ್

ಉಡುಪಿ: ಹೆದ್ದಾರಿ ಟೋಲ್‌ಗೇಟ್‌ಗಳಲ್ಲಿ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸದೆ ಫಾಸ್ಟ್‌ಟ್ಯಾಗ್ ಮೂಲಕ ಕೇಂದ್ರ ಸರಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ವಸೂಲಿ ಮಾಡ ಹೊರಟಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಫಾಸ್ಟ್ ಟ್ಯಾಗ್ ಅಳವಡಿಕೆ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.


ಫಾಸ್ಟ್‌ಟ್ಯಾಗ್ ಅಳವಡಿಕೆಯೊಂದಿಗೆ ಸ್ಥಳೀಯ ವಾಹನಗಳಿಗೆ ರಿಯಾಯಿತಿ ರದ್ದತಿಪಡಿಸಿರುವುದು ಪರಿಸರದ ನಿವಾಸಿಗಳ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿದೆ ಈ ನಿಟ್ಟಿನಲ್ಲಿ ಪ್ರಾಧಿಕಾರ ಸ್ಥಳಿಯರ ಬೇಡಿಕೆಗೆ ಸ್ಪಂದಿಸಬೇಕಾಗಿದೆ. ಫಾಸ್ಟ್ ಟ್ಯಾಗ್ ಇಲ್ಲದಿದ್ದಲ್ಲಿ ನಗದು ಸುಂಕ ಪಾವತಿಯನ್ನು ಡಿಸೆಂಬರ್ 1 ರಿಂದ ದುಪ್ಪಟ್ಟುಗೊಳಿಸಿರುವುದು ಹಾಗೂ ನಗದು ಪಾವತಿಗೆ ಒಂದೇ ಗೇಟ್ ಮಾತ್ರ ಕಲ್ಪಿಸಲಾಗುವುದು ಎಂಬ ರಾ.ಹೆ. ಪ್ರಾಧಿಕಾರದ ಹೇಳಿಕೆ ಜನರ ಸಮಸ್ಯೆಯನ್ನು ದ್ವಿಗುಣಗೊಳಿಸಿದೆ.

ಒಂದೆಡೆ ದ್ವಿಗುಣ ಶುಲ್ಕ ಇನ್ನೊಂದೆಡೆ ಒಂದೇ ಗೇಟಿನಿಂದಾಗಿ ದಟ್ಟಣೆ ಹೆಚ್ಚಬಹುದೆಂಬ ಭೀತಿ ಜನಸಾಮಾನ್ಯರ ಸಮಸ್ಯೆ ಹೆಚ್ಚಾಗಲು ಕಾರಣವಾಗಬಹುದು. ಇಷ್ಟರವರೆಗೆ ವಾಹನಗಳಿಗೆ 24 ಗಂಟೆಗಳ ಪ್ರಯಾಣ ಮಾಡುವ ಅವಕಾಶ ಹಾಗೂ ದ್ವಿಮುಖ ವಾಹನ ಸಂಚಾರದ ಟೋಲ್ ಪಾವತಿಸುವ ವ್ಯವಸ್ಥೆಯಿದ್ದು ಇನ್ನು ಮುಂದೆ ಆ ಅವಕಾಶದಿಂದ ಪ್ರಯಾಣಿಕರು ವಂಚಿತರಾಗುವ ಸಂಭವವಿದೆ. ಈ ನಿಯಮ ಜಾರಿಗೊಂಡಲ್ಲಿ ಜನಸಾಮಾನ್ಯನ ಸೌಲಭ್ಯವನ್ನು ಕಸಿದುಕೊಂಡಂತೆ. ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಪ್ರಾಧಿಕಾರಕ್ಕೆ ಮೂರರಿಂದ ನಾಲ್ಕು ಪಟ್ಟು ಆದಾಯ ಏರಿಕೆಗೊಳ್ಳುವುದರಲ್ಲಿ ಸಂಶಯವಿಲ್ಲ. ಜನರ ಹಿತಾಸಕ್ತಿಯನ್ನು ಪರಿಗಣಿಸದೆ ಜನ ಸಾಮಾನ್ಯರ ಕಿಸೆಗೆ ಕತ್ತರಿ ಪ್ರಯೋಗಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.


ಫಾಸ್ಟ್ ಟ್ಯಾಗ್ ಅಳವಡಿಕೆಯೊಂದಿಗೆ ಸುಂಕ ಪಾವತಿ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದಾಗ ಬ್ಯಾಂಕಿನಲ್ಲಿಯೂ ನಿರ್ದಿಷ್ಟ ಹಣವನ್ನು ಠೇವಣಿಯನ್ನು ಇಡಬೇಕಾಗುವುದು. ದೇಶದಲ್ಲಿ 15 ಕೋಟಿಗೂ ಅಧಿಕ ವಾಹನಗಳು ಚಾಲನೆಯಲ್ಲಿರಬಹುದು. ಎಲ್ಲರೂ ಫಾಸ್ಟ್ ಟ್ಯಾಗ್ ನೊಂದಣಿ ಮಾಡಿಸಿಕೊಂಡಲ್ಲಿ ಬ್ಯಾಂಕ್‌ಗಳಿಗೆ ಬಂಡವಾಳ ಹರಿದು ಬರುವುದಲ್ಲಿ ಸಂಶಯವಿಲ್ಲ. ಫಾಸ್ಟ್ ಟ್ಯಾಗ್ ಅಳವಡಿಕೆ ಬಗ್ಗೆ ಮುತುವರ್ಜಿ ವಹಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಹಾಗೂ ಸರ್ವಿಸ್ ರಸ್ತೆ ನಿರ್ಮಾಣದ ಬಗ್ಗೆ ಆಸಕ್ತಿ ವಹಿಸಿಲ್ಲ. ಸುರತ್ಕಲ್ ಟೋಲ್ ಕೇಂದ್ರದ ಕೇವಲ 36 ಕಿ.ಮೀ. ಅಂತರದಲ್ಲಿ ಇನ್ನೊಂದು ಟೋಲ್ ಗೇಟ್ ಇರುವುದನ್ನು ಜನತೆ ವಿರೋಧಿಸಿ ಪ್ರತಿಭಟಿಸಿದರೂ ಹೆದ್ದಾರಿ ಪ್ರಾಧಿಕಾರ ಜನತೆಯ ಬೇಡಿಕೆಗೆ ಸ್ಪಂದಿಸಿಲ್ಲ. ರಾಷ್ಟ್ರೀಯ ಹೆದ್ದಾರಿ ಬಗ್ಗೆಯಾಗಲಿ ಟೋಲ್ ಗೇಟ್ ನೈಜ ಸಮಸ್ಯೆಯ ಪರಿಹಾರಕ್ಕಾಗಿ ಉಡುಪಿ ಹಾಗೂ ಮಂಗಳೂರು ಸಂಸದರು ಯಾವುದೇ ಕಾಳಜಿ ವಹಿಸಿಲ್ಲ. ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ಡಿಜಿಟಲ್ ಅಳವಡಿಕೆಯೊಂದಿಗೆ ಜನರ ಕಿಸೆಗೆ ಕತ್ತರಿ ಪ್ರಯೋಗಕ್ಕೆ ಮುಂದಾಗಿರುವುದು ಕೇಂದ್ರದ ಜನವಿರೋಧಿ ನೀತಿಗೆ ಉದಾಹರಣೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!