ಬಂಟ್ವಾಳ: ಬಾವಿಗೆ ಬಿದ್ದ ವೃದ್ಧೆಯನ್ನು ರಕ್ಷಿಸಿದ ಯುವಕ
ಬಂಟ್ವಾಳ, : ಆಕಸ್ಮಿಕವಾಗಿ ಬಾವಿಗೆ ಬಿದ್ದ ವೃದ್ಧೆಯನ್ನು ಯುವಕನೋರ್ವ ಜೀವವುಳಿಸಿದ ಘಟನೆ ಸಜೀಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಇಲ್ಲಿನ ಕೊಳಕೆ ನಿವಾಸಿ ಸಿದ್ದೀಕ್, ಪಾರ್ವತಿ (೬೦) ಎಂಬವರ ಪ್ರಾಣ ಉಳಿಸಿದ ಯುವಕ. ಪಾರ್ವತಿ ಅವರು ಗುರುವಾರ ಬೆಳಿಗ್ಗೆ ಮನೆಯ ಸಮೀಪದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದರು.
ಇದನ್ನು ಕಂಡ ಪಕ್ಕದ ಮನೆಯವರು ಸಹಾಯಕ್ಕಾಗಿ ಬೊಬ್ಬೆ ಹಾಕಿದ್ದಾರೆ. ಇದೇ ವೇಳೆ ಪಕ್ಕದ ಅಂಗಡಿಯೊಂದರಲ್ಲಿ ಪತ್ರಿಕೆ ಓದುತ್ತಾ ಕುಳಿತ್ತಿದ್ದ ಸ್ಥಳೀಯ ಯುವಕ ಸಿದ್ದೀಕ್ ತಕ್ಷಣ ಬಾವಿಯತ್ರ ದಾವಿಸಿ ನೀರಿಗೆ ಧುಮುಕಿದ್ದಾರೆ. ಬಳಿಕ ಹಗ್ಗದ ಮೂಲಕ ಸ್ಥಳೀಯರ ಸಹಾಯದಿಂದ ಪಾರ್ವತಿ ಅವರನ್ನು ಮೇಲೆಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಘಟನೆಯಿಂದ ಅಶ್ವಸ್ಥಗೊಂಡಿದ್ದ ಪಾರ್ವತಿ ಅವರನ್ನು ತಕ್ಷಣ ಬಂಟ್ವಾಳ ಆಸ್ಪತ್ರೆಗೆ ದಾಖಲಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.
ಇದೀಗ ಪಾರ್ವತಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಪಾರ್ವತಿ ಅವರಿಗೆ ಮೂವರ ಮಕ್ಕಳ ಪೈಕಿಯ ಕಿರಿಯ ಮಗನಾದ ದಿವಾಕರ್ ಅವರೊಂದಿಗೆ ವಾಸವಾಗಿದ್ದಾರೆ. ದಿವಾಕರ ಹಾಗೂ ಸಿದ್ದೀಕ್ ಪರಸ್ಪರ ಸ್ನೇಹಿತರಾಗಿದ್ದಾರೆ.
ಶ್ಲಾಘನೆ:
ತನ್ನ ಜೀವದ ಹಂಗು ತೊರೆದು, ಹಿಂದೆ-ಮುಂದೆ ನೋಡದೆ ಬಾವಿಗೆ ಧುಮುಕಿ ಪಾರ್ವತಿ ಅವರನ್ನು ರಕ್ಷಿಸಿದ ಸಿದ್ದೀಕ್ ಅವರ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸಿದ್ದೀಕ್ ಅವರ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲೂ ಶ್ಲಾಘನೆ ವ್ಯಕ್ತವಾಗುವ ಸಂದೇಶಗಳು ವೈರಲ್ ಆಗುತ್ತಿದೆ.