ಜುಲೈ 21: ಶ್ರೀ ವೀರಮಾರುತಿ ವ್ಯಾಯಾಮ ಶಾಲೆ (ರಿ), ನಾಲ್ಕನೇ ವರ್ಷದ “ಕೆಸರ್ಡೊಂಜಿ ಗಮ್ಮತ್ತು”

ಉಡುಪಿ: ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಇಂದಿನ ಮಕ್ಕಳಿಗೆ ಕೃಷಿಯ ಅರಿವಿರದ ಸಮಯದಲ್ಲೂ ಜಿಲ್ಲೆಯ ಖ್ಯಾತ ಸಂಘ ಸಂಸ್ಥೆಗಳಲ್ಲಿ ಒಂದಾಗಿರುವ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳಬೆಟ್ಟು ಯುವಜನರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸತತ ನಾಲ್ಕನೇ ವರ್ಷದ ಕೆಸರ್ಡೊಂಜಿ ಗಮ್ಮತ್ತು ಗ್ರಾಮೀಣ ಕ್ರೀಡಾಕೂಟವನ್ನು ಹಮ್ಮಿಕೊಂಡಿದೆ.
ಕೆಳಾರ್ಕಳಬೆಟ್ಟು ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಗದ್ದೆಯಲ್ಲಿ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಇವರ ನೇತೃತ್ವದಲ್ಲಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಡುಪಿ ಇದರ ಸಹಯೋಗದೊಂದಿಗೆ ಜುಲೈ 21, ಭಾನುವಾರ ಬೆಳಿಗ್ಗೆ ನಾಲ್ಕನೇ ವರ್ಷದ “ಕೆಸರ್ಡೊಂಜಿ ಗಮ್ಮತ್ತು” ಕ್ರೀಡಾಕೂಟವನ್ನು ಉಡುಪಿ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ತೋನ್ಸೆ, ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಶೆಟ್ಟಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಡುಪಿ ಇದರ ಉಪನಿರ್ದೇಶಕ ರೋಶನ್ ಶೆಟ್ಟಿ ಮತ್ತು ಇನ್ನಿತರ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ ಉದ್ಯಮಿ ಪ್ರಖ್ಯಾತ್ ಶೆಟ್ಟಿ ತಿಳಿಸಿದ್ದಾರೆ.
ಸತತ ನಾಲ್ಕು ವರ್ಷದಿಂದ ಪ್ರಖ್ಯಾತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ “ಕೆಸರ್ಡೊಂಜಿ ಗಮ್ಮತ್ತು” ಗ್ರಾಮೀಣ ಕ್ರೀಡಾಕೂಟವನ್ನು ನಡೆಸುತ್ತಿದ್ದು, ಸ್ಥಳೀಯ ಸಾರ್ವಜನಿಕರು ಮತ್ತು ಯುವಜನರು ಉತ್ಸಾಹದಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆ.
ಪುರುಷರಿಗೆ ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಕ್ರಿಕೆಟ್, ರಿಲೇ, ರೌಂಡ್ ದ ವಿಕೆಟ್, 100 ಮೀ. ಓಟ, ಮೂರು ಕಾಲು ಓಟ ಮತ್ತು ಮಹಿಳೆಯರಿಗೆ ತ್ರೋಬಾಲ್, ಹಗ್ಗ ಜಗ್ಗಾಟ, ಮ್ಯೂಸಿಕಲ್ ಚಯರ್, ರಿಲೇ, ರೌಂಡ್ ದ ವಿಕೆಟ್, 100 ಮೀ.ಓಟ, ಮೂರು ಕಾಲು ಓಟ ಸಹಿತ ನಿಧಿ ಹುಡುಕುವುದು, ಆದರ್ಶ ದಂಪತಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಧ್ಯಾಹ್ನ ಗ್ರಾಮೀಣ ಭಾಗದ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದರು.
ಯುವಜನರನ್ನು ಕೃಷಿಯ ಕಡೆಗೆ ಸೆಳೆಯುವುದರ ಜೊತೆಗೆ, ಅವರಿಗೆ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಗಳ ಪರಿಚಯ ಮಾಡಿಕೊಡುವುದು ನಮ್ಮ ಸಂಘಟನೆಯ ಉದ್ದೇಶವಾಗಿದ್ದು, ಈ ಗ್ರಾಮೀಣ ಕೂಟ ಕೇವಲ ಮೋಜಿಗಾಗಿ ನಡೆಯದೆ ಅದರ ಅನುಭವವನ್ನು ಯುವ ಜನರ ಮನಸ್ಸಿನಲ್ಲಿ ಸದಾಕಾಲ ಉಳಿಸಲು ಗ್ರಾಮೀಣ ಕ್ರೀಡಾ ಕೂಟವನ್ನು ಹಮ್ಮಿಕೊಂಡಿದ್ದೇವೆ ಎಂದು ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳಬೆಟ್ಟು ಅಧ್ಯಕ್ಷರಾದ ಉದ್ಯಮಿ ಪ್ರಖ್ಯಾತ ಶೆಟ್ಟಿ ತೆಂಕನಿಡಿಯೂರು  ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!