ಕಲಾಕುಲೋತ್ಸವದಲ್ಲಿ ಆಂಟಿಗೊನ್ ನಾಟಕ ಪ್ರದರ್ಶನ
ಕೊಂಕಣಿಯ ವೃತ್ತಿಪರ ನಾಟಕ ರೆಪರ್ಟರಿ ಕಲಾಕುಲ್ ಹಮ್ಮಿಕೊಂಡ ಕಲಾಕುಲೋತ್ಸವ್-2019 ಇದರ ಉದ್ಘಾಟನಾ ಸಮಾರಂಭವು 17.08.2019 ರಂದು ಸಂಜೆ 6.00 ಗಂಟೆಗೆ, ಸಂತ ಎಲೋಶಿಯಸ್ ಕಾಲೇಜಿನ ಎಲ್ಸಿಆರ್ಐ ಸಭಾಂಗಣದಲ್ಲಿ ನಡೆಯಿತು.
ಸಂಸ್ಥೆಯ ಹಣಕಾಸು ಅಧಿಕಾರಿ ವಂ. ವಿನ್ಸೆಂಟ್ ಪಿಂಟೊ ಚೆಂಡೆ ಬಡಿದು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕ ಲಾರೆನ್ಸ್ ಪಿಂಟೊ, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್, ಕಾಲೇಜು ನಾಟಕ ಸಂಘದ ಅಧ್ಯಕ್ಷೆ ಸುಧಾ ಕುಮಾರಿ, ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಿಕೆ ಹಾಗೂ ನಾಟಕ ತರಬೇತುದಾರರಾದ ಭವ್ಯ ಉಪಸ್ಥಿತರಿದ್ದರು.
ಗಣ್ಯರಿಗೆ ನಾಟಕ ಪುಸ್ತಕಗಳ ಪ್ರತಿ ನೀಡಿ ಗೌರವಿಸಲಾಯಿತು. ನಂತರ ಅರುಣ್ ರಾಜ್ ರಾಡ್ರಿಗಸ್ ಕೊಂಕಣಿಗೆ ಅನುವಾದಿಸಿ, ವಿದ್ದು ಉಚ್ಚಿಲ್ ನಿರ್ದೇಶಿಸಿದ ಸೊಫೊಕ್ಲಿಸನ ಆಂಟಿಗೊನ್ ನಾಟಕವನ್ನು ಕಲಾವಿದರುಗಳಾದ ಸುಶ್ಮಿತಾ ತಾವ್ರೊ, ಮನೀಶ್ ಪಿಂಟೊ, ಫ್ಲಾವಿಯಾ ಮಸ್ಕರೇನ್ಹಸ್, ಸವಿತಾ ಸಲ್ಡಾನ್ಹಾ, ಆಮ್ರಿನ್ ಡಿಸೋಜ, ಜೀವನ್ ಸಿದ್ದಿ, ಶ್ರವಣ್ ಬಾಳಿಗಾ, ರೆನೊಲ್ಡ್ ಲೋಬೊ ಅಭಿನಯಿಸಿದರು. ಗುರುಮೂರ್ತಿ ವಿ.ಎಸ್. ಸಂಗೀತದಲ್ಲಿ ಸಹಕರಿಸಿದರು.
ಕಲಾಕುಲೋತ್ಸವದ ಎರಡನೇ ನಾಟಕ ಪೇಯಿಂಗ್ ಗೆಸ್ಟ್ 25.08.2019 ರಂದು ಸಂಜೆ 6.30ಕ್ಕೆ ವಾಮಂಜೂರಿನ ಚರ್ಚ್ ಸಭಾಂಗಣದಲ್ಲಿ ನಡೆಯಲಿದೆ.