ಸಂಚಾರಿ ನಿಯಮ ಪಾಲನೆ ತಪ್ಪಿದಲ್ಲಿ ಯಮಲೋಕದಲ್ಲೂ ದಂಡ..

ರಸ್ತೆಯಲ್ಲಿ ಸಂಚಾರಿ ನಿಯಮ ಪಾಲನೆ ಮಾಡದಿದ್ದಲ್ಲಿ ಪೊಲೀಸ್ , ಸಾರಿಗೆ ಇಲಾಖೆಗೆ ವಿಧಿಸುವ ಮಾತ್ರ ದಂಡ ನೀಡಬೇಕು ಹಾಗೂ ನ್ಯಾಯಾಲಯ ನೀಡುವ ಶಿಕ್ಷೆ ಅನುಭವಿಸಬೇಕು ಅಥವಾ ಶಿಫಾರಸ್ಸು ಮಾಡಿ ಹಾಗೂ ವಕೀಲರ ಮೂಲಕ ವಾದ ಮಾಡಿಸಿ , ದಂಡ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದರೆ ತಪ್ಪು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ನೀವು ಮೃತಪಟ್ಟ ನಂತರ ಯಮಲೋಕದಲ್ಲೂ ಸಹ ಯಮನಿಂದ ಕಠಿಣ ದಂಡನೆಗೆ ಒಳಗಾಗಬೇಕಾಗುತ್ತದೆ …   

ಇದು , ಸ್ವಾತಂತ್ರ್ಯ ದಿನಾಚರಣೆಯಂದು ಉಡುಪಿಯ ಪುರಭವನದಲ್ಲಿ , ರಸ್ತೆ ಸುರಕ್ಷತೆಯ ಅರಿವಿಗಾಗಿ ಉಡುಪಿ ಜಿಲ್ಲಾಡಳಿತ ಆಯೋಜಿಸಿದ್ದ “ಯಮದಂಡ” ಯಕ್ಷಗಾನ ಪ್ರಸಂಗದ ತಿರುಳು..

ಭೂ ಲೋಕದಲ್ಲಿ ಸತ್ತು, ಯಮಲೋಕಕ್ಕೆ ಆಗಮಿಸಿದ ಜೀವಾತ್ಮಗಳ ಪಾಪ ಪುಣ್ಯಗಳ ಪರಿಶೀಲನೆ ನಡೆಸುತ್ತಿರುವ ಯಮ, ಮನುಷ್ಯ ಆತ್ಮವೊಂದು ಬಂದ ಸಂದರ್ಭದಲ್ಲಿ ಆತನ ಸಾವಿಗೆ ಕಾರಣ ಮತ್ತು ಆತನ ಪಾಪ ಪುಣ್ಯಗಳ ಲೆಕ್ಕ ನೀಡುವಂತೆ ಚಿತ್ರಗುಪ್ತನಲ್ಲಿ ಕೇಳುತ್ತಾನೆ.

ಭೂಲೋಕದಲ್ಲಿನ ಧನಿಕನೋರ್ವನ ಏಕೈಕ ಪುತ್ರ, ಶಾಲಾ ವಿದ್ಯಾರ್ಥಿ, ಬೆಲೆ ಬಾಳುವ ದ್ವಿಚಕ್ರ ವಾಹನ ಹೊಂದಿದ್ದ ಈತ , ವಾಹನ ಚಾಲನೆಯ ಪರವಾನಗಿ ಪಡೆಯದೇ , ಹೆಲ್ಮೆಟ್ ಧರಿಸದೇ, ಅತಿ ವೇಗದಲ್ಲಿ, ಮೊಬೈಲ್ ನಲ್ಲಿ ಮಾತನಾಡುತ್ತಾ, ದಾರಿಯಲ್ಲಿ ಹೋಗುತ್ತಿದ್ದ ನಿರಪರಾಧಿ ಬಾಲಕನಿಗೆ ಅಪಘಾತ ಮಾಡಿ, ಆತನ ಸಾವಿಗೆ ಕಾರಣನಗಿದ್ದಾನೆ ಅಲ್ಲದೇ ಅದೇ ಅಪಘಾತದಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಈತನೂ ಮೃತಪಟ್ಟಿದ್ದಾನೆ ಎಂದು ವಿವರಿಸುತ್ತಾನೆ.

ಕೂಡಲೇ ರೋಷಗೊಂಡ ಯಮ, ಇತ್ತೀಚೆಗೆ ಯಮಲೋಕಕ್ಕೆ ಭೂಲೋಕದಿಂದ ಅಪಘಾತಗಳಿಂದ ಮೃತಪಟ್ಟ ಪ್ರೇತಾತ್ಮಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ, ಭೂ ಲೋಕದಲ್ಲಿರುವ ಜನರಿಗೆ ಸಂಚಾರಿ ನಿಯಮಗಳ ಅರಿವಿಲ್ಲವೇ , ಸರಕಾರದ ಅಧಿಕಾರಿಗಳು ನಿಯಮಗಳನ್ನು ರೂಪಿಸಿಲ್ಲವೇ, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಿಲ್ಲವೇ, ಏನು ನಡೆಯುತ್ತಿದೆ ಭೂ ಲೋಕದಲ್ಲಿ ಎಂದು ಪ್ರಶ್ನಿಸುತ್ತಾನೆ.

ಭೂ ಲೋಕದಲ್ಲಿ , ವಾಹನ ಚಾಲನೆಯ ಪರವಾನಗಿ ಪಡೆಯದೇ ಇರುವುದಕ್ಕೆ, ಹೆಲ್ಮೆಟ್ ಧರಿಸದೇ, ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವುದಕ್ಕೆ, ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದಕ್ಕೆ, ಅಪಘಾತದಿಂದ ಮತ್ತೊಬ್ಬರ ಪ್ರಾಣ ಹಾನಿ ಮಾಡಿದ್ದಕ್ಕೆ ಇರುವ ದಂಡ ಮತ್ತು ಶಿಕ್ಷೆಗಳ ಬಗ್ಗೆ ವಿವರಿಸುತ್ತಾನೆ.

ಭೂಲೋಕದ ಆಡಳಿತ ವ್ಯವಸ್ಥೆಯಲ್ಲಿ  ಇಷ್ಟೆಲ್ಲಾ ಕ್ರಮ ನಿಯಮಗಳಿದ್ದರೂ, ಧನ ಭಲ ಹಾಗೂ ಗರ್ವದಿಂದ ನಿಯಮ ಪಾಲಿಸದ ಈತ ಪಾಪಿಯೇ ಸರಿ, ಅಪಘಾತ ಮಾಡಿ , ಲೋಕದಲ್ಲಿ ಇನ್ನೂ ಬಾಳಿ ಬೆಳಗಬೇಕಾದ ಬಾಲಕನ ಹತ್ಯಗೆ ಕಾರಣನಾದ ಈತನನ್ನು ಕುಂಭಿಪಾಕ ಎನ್ನುವ ನರಕಕ್ಕೆ ತಳ್ಳಿ ಆದೇಶಿಸುತ್ತಾನೆ.

ನಂತರ ಬಂದ ಮತ್ತೊಂದು ಆತ್ಮದ ಸಾವಿಗೆ ಕಾರಣ ಮತ್ತು ಆತನ ಪಾಪ ಪುಣ್ಯಗಳ ಲೆಕ್ಕ ಪರಿಶೀಲಿಸುವ ಯಮ, ಭೂ ಲೋಕದಲ್ಲಿ ದುರುಳನಾಗಿ ಕಾಲ ಕೆಳದು, ನಾಲ್ಕು ಚಕ್ರದ ವಾಹನ ಹೊಂದಿದ್ದ ಈತ, ವಾಹನದ ಅವಧಿ ನವೀಕರಿಸದೆ, ವಾಹನಕ್ಕೆ ವಿಮೆ ಮಾಡಿಸದೆ,ವಾಹನ ಚಾಲನೆ ಸಮಯದಲ್ಲಿ ಸೀಟ್ ಬೆಲ್ಟ್ ಹಾಕದೇ, ವಿಪರೀತ ಪಾನಮತ್ತನಾಗಿ ವಾಹನ ಚಲಾಯಿಸಿ, ವಿದ್ಯುತ್ ಕಂಬಕ್ಕೆ ಗುದ್ದಿ ಆ ಕಂಬ ಪಕ್ಕದ ಮನೆ ಮೇಲೆ ಬಿದ್ದು, ಆ ಇಡೀ ಕುಟುಂಬದ ಸರ್ವನಾಶಕ್ಕೆ ಕಾರಣನಾಗಿ, ಅಲ್ಲಿಂದ ತಲೆ ಮರೆಸಿಕೊಂಡು ಜೀವನೋಪಾಯಕ್ಕೆ ಕಳ್ಳತನ, ದರೋಡೆ ಮಾಡುತ್ತಿದ್ದು, ಒಮ್ಮೆ ಅತಿಯಾಗಿ ಕುಡಿದು ರಸ್ತೆಯಲ್ಲಿ ನಡೆಯುವಾಗ, ಆಯ ತಪ್ಪಿ ವಾಹನದ ಕೆಳಗೆ ಬಿದ್ದು ಸಾವನಪ್ಪಿರುವುದನ್ನು  ತಿಳಿದ ಯಮ, ಕೆಡಕು ಎಂಬ ಎಚ್ಚರಿಕೆ ನುಡಿಯನ್ನು ಲೆಕ್ಕಿಸದೇ, ಪಾನಮತ್ತನಾಗಿ ವಾಹನಘಾತದಿಂದ ಹತ್ತಾರು ಜನರನ್ನು ಬಲಿ ಪಡೆದ ಈತ ನಿಜವಾಗಿ ಪಾಪಿ ಈತನನ್ನು “ಕ್ರಿಮಿ ಭೋಜನ”  ಎಂಬ ನರಕ್ಕೆ ತಳ್ಳುವಂತೆ ಆದೇಶಿಸುತ್ತಾನೆ.

ಭೂ ಲೋಕದಲ್ಲಿ ಇಷ್ಟೊಂದು ರಸ್ತೆ ನಿಯಮಗಳು, ದಂಡ, ಶಿಕ್ಷೆ ಇದ್ದರೂ , ಜನರಿಗೆ ಇದರ ಬಗ್ಗೆ ಅರಿವು ಇದೆಯಾ, ಅಧಿಕಾರಿಗಳು ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದಾರಾ ಎಂದು ಪ್ರಶ್ನಿಸುತ್ತಾನೆ.

 ಭೂ ಲೋಕದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಎಲ್ಲಡೆ ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ, ಶಾಲಾ ಮಕ್ಕಳಿಗೆ ವಿವಿಧ ಪ್ರಚಾರ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ, ಉಡುಪಿ ಎಂಬ ಜಿಲ್ಲೆಯಲ್ಲಿ ಎಲ್ಲಾ ಶಾಲೆಗಳ ಗೋಢೆಗಳ ಮೇಲೆ ಮಾಹಿತಿಯ ಚಿತ್ರಗಳನ್ನು ಬಿಡಿಸಲಾಗಿದೆ, ಕಲಾಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ, ಆರಕ್ಷಕ ಇಲಾಖೆಯವರು ಕಿರುಚಿತ್ರಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ ಅಲ್ಲದೇ ಪ್ರಸ್ತುತ ಸಂಚಾರ ನಿಯಮಗಳ ಉಲ್ಲಂಘನೆಗೆ ಅತೀ ಹೆಚ್ಚಿನ ದಂಡ ಮತ್ತು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬಂದಿದೆ ಚಿತ್ರಗುಪ್ತ ವಿವರಿಸುತ್ತಾನೆ.

 ಹಾಗಾದರೆ ಇನ್ನು ಮುಂದಾದರೂ ರಸ್ತೆ ಅಪಘಾತಗಳಿಂದ ಮೃತಪಟ್ಟು ಯಮಲೋಕ್ಕೆ ಬರುವ ಪ್ರೇತಾತ್ಮಗಳ ಸಂಖ್ಯೆ ಕಡಿಮೆಯಾಗಲಿ ಎಂದು ಯಮ ಹಾರೈಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

ರಸ್ತೆ ಸಂಚಾರ ನಿಯಮ ಉಲ್ಲಂಘಿಸಿ, ಭೂ ಲೋಕದ ಕಾನೂನು ವಿಧಿಸುವ ದಂಡ ಕಟ್ಟಿ ಅಥವಾ ಕಟ್ಟದೇ ತಪ್ಪಿಸಿಕೊಳ್ಳಬಹುದು ಎಂದು ಕೊಳ್ಳುವವರು, ಮೃತಪಟ್ಟ ನಂತರ ಯಮಲೋಕದಲ್ಲಿ ಯಮನ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದರ ಜೊತೆಗೆ, ಸಂಚಾರ ನಿಯಮಗಳ ಪಾಲನೆಯ ಮಹತ್ವವನ್ನು ಕಾರ್ಯಕ್ರಮ ನಿರೂಪಿಸಿತು.

ಕಲಾಪೀಠ ಕೋಟ (ರಿ) ಇವರು ಪ್ರಸ್ತುತ ಪಡಿಸಿದ ಈ “ಯಮದಂಡ” ಯಕ್ಷಗಾನವನ್ನು ಕೆ.ನರಸಿಂಹ ತುಂಗ ನಿರ್ದೇಶಿಸಿದ್ದು, ಪರಿಕಲ್ಪನೆ ಹಾಗೂ ಪ್ರಸಂಗ ರಚನೆ ನಾಗೇಶ್ ಶಾನುಬೋಗ್ (ನಿವೃತ್ತ ಶಿಕ್ಷಣಾಧಿಕಾರಿ), ಮೊಗೆಬೆಟ್ಟು ಇವರದ್ದು.

ಯಮನ ಪಾತ್ರಧಾರಿಯಾಗಿ ಉಡುಪಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಅಶ್ಪಕ್ ಅಭಿನಯಿಸಿದ್ದು, ಯಮ ರೋಷಗೊಳ್ಳುವ ಸನ್ನಿವೇಶದಲ್ಲಿ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು, ಅವರ ಇಡೀ ಅಭಿನಯ ಅತ್ಯಂತ ಮನೋಜ್ಞವಾಗಿತ್ತು. ಚಿತ್ರಗುಪ್ತನಾಗಿ ನರಸಿಂಹ ತುಂಗ ಅಭಿನಯಿಸಿ, ನವಿರಾದ ಹಾಸ್ಯದ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು.

ಸಂಚಾರ ಸುರಕ್ಷತೆ ಕುರಿತಂತೆ , ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಅವರ ವಿಶೇಷ ಆಸಕ್ತಿಯಿಂದ ರಚನೆಗೊಂಡಿರುವ ಈ ಯಕ್ಷಗಾನ ಪ್ರದರ್ಶನವನ್ನು ಜಿಲ್ಲೆಯ ವಿವಿದಡೆಗಳಲ್ಲಿ ಸಾರ್ವಜನಿಕ ಪ್ರದರ್ಶನಗಳ ಮೂಲಕ ಜನರಿಗೆ ಅರಿವು ಮೂಡಿಸಲು ಬಳಸಿಕೊಳ್ಳಲಾಗುತ್ತಿದ್ದು, ಯಕ್ಷಗಾನ ಮಾತ್ರವಲ್ಲದೇ , ಮುಂದಿನ ದಿನದಲ್ಲಿ ಮೈಮ್ ಷೋ, ಮ್ಯಾಜಿಕ್ ಮುಂತಾದವುಗಳ ಮೂಲಕ ಸಹ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಕುರಿತಂತೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಲು ಚಿಂತನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!