ಸೈನಿಕರ ತವರೂರು ಕೊಡಗು ಜಿಲ್ಲೆಗೆ ಮತ್ತೊಂದು ಹೆಮ್ಮೆಯ ಗರಿ ಫ್ಲೈಟ್ ಲೆಫ್ಟಿನೆಂಟ್ ಡಾ. ಕಾವೇರಮ್ಮ
ಮಡಿಕೇರಿ : ಸೈನಿಕರ ತವರೂರು ಎಂದೇ ಕರೆಯಲ್ಪಡುವ ಕೊಡಗು ಜಿಲ್ಲೆಗೆ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಭಾರತೀಯ ವಾಯು ಪಡೆಯ ವೈದ್ಯಕೀಯ ಕ್ಷೇತ್ರದಲ್ಲಿ ಕೊಡಗಿನ ಕುವರಿ ಪೊನ್ನಂಪೇಟೆ ನಿವಾಸಿ ಡಾ. ಐನಂಡ ಬಿ. ಕಾವೇರಮ್ಮ ಅವರು ಫ್ಲೈಟ್ ಲೆಫ್ಟಿನೆಂಟ್ ಆಗಿ ನೇಮಕವಾಗಿದ್ದಾರೆ. ಐನಂಡ.ಬಿ ಕಾವೇರಮ್ಮ ಅವರು ತಮ್ಮ ವೈದ್ಯಕೀಯ ವಿದ್ಯಾಭ್ಯಾಸದ ತರಬೇತಿ ಅವಧಿಯಲ್ಲಿ ಭಾರತೀಯ ಸೇನೆ ನಡೆಸಿದ ‘ಶಾರ್ಟ್ ಸರ್ವಿಸ್ ಕಮಿಷನ್’ ಪರೀಕ್ಷೆಯಲ್ಲಿ ಪಾಲ್ಗೊಂಡು ಅದರಲ್ಲಿ ಉತ್ತೀರ್ಣರಾಗಿ ಭಾರತೀಯ ವಾಯುಪಡೆಯ ಕಮಿಷನ್ಡ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ವ್ಯೆದ್ಯಕೀಯ ತರಬೇತಿಯನ್ನು ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಪೂರೈಸಿರುವ ಡಾ. ಕಾವೇರಮ್ಮ, ಇದೀಗ ಫ್ಲೈಟ್ ಲೆಫ್ಟಿನೆಂಟ್ ಆಗಿ ಬಡ್ತಿ ಹೊಂದಿದ್ದಾರೆ. ಜುಲೈ 27 ರಂದು ಉತ್ತರ ಪ್ರದೇಶದ ಲಕ್ನೊದಲ್ಲಿ ನಡೆದ ಸೇನಾ ತರಬೇತಿಯನ್ನು ಕೂಡ ಪೂರ್ಣಗೊಳಿಸಿ ಪ್ರಸ್ತುತ ಜೋದ್ಪುರದ ವಾಯು ನೆಲೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಈಕೆ ಭಾರತೀಯ ವಾಯುಪಡೆಯ ವೈದ್ಯಕೀಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಏಕೈಕ ಕೊಡವ ಮಹಿಳಾ ವೈದ್ಯಳಾಗಿದ್ದಾಳೆ.
ಫ್ಲೈಟ್ ಲೆಫ್ಟಿನೆಂಟ್ ಡಾ. ಐನಂಡ ಬಿ.ಕಾವೇರಮ್ಮ ಪೊನ್ನಂಪೇಟೆಯ ಮೈಸೂರು ಮಿತ್ರ ಪತ್ರಿಕೆಯ ಗೌರವ ವರದಿಗಾರ ಐನಂಡ ಕೆ. ಬೋಪಣ್ಣ ಹಾಗೂ ಭಾರತಿ ಬೋಪಣ್ಣ ಅವರ ಪುತ್ರಿಯಾಗಿದ್ದು, ಚಿಕ್ಕಮಂಡೂರಿನ ಕಾಫಿ ಬೆಳೆಗಾರ ದಿ. ಐನಂಡ ಎಸ್. ಕಾರ್ಯಪ್ಪ, ಜಾನಕಿ ಹಾಗೂ ಗೋಣಿಕೊಪ್ಪಲಿನ ಹಿರಿಯ ಉದ್ಯಮಿ ಮಾಣಿಪಂಡ ಸೋಮಯ್ಯ, ಪಾರ್ವತಿ ಅವರ ಮೊಮ್ಮಗಳಾಗಿದ್ದಾಳೆ.