ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ವಾರ್ಷಿಕ ಮಹಾಸಭೆ
ಬಂಟ್ವಾಳ: ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಬಂಟ್ವಾಳ ತಾಲೂಕು ಇದರ ಮೂರನೇ ವಾರ್ಷಿಕ ಮಹಾಸಭೆ, ಹಿರಿಯ ಸಾಧಕರಿಗೆ ಹಿರಿಯ ಕಾರ್ಮಿಕರಿಗೆ ಸನ್ಮಾನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ರೋಟರಿ ಕ್ಲಬ್ ವಿಟ್ಲ ಇದರ ಅಧ್ಯಕ್ಷ ಜಯರಾಮ ರೈ ಪಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು, ಸೇವಾ ಮನೋಭಾವದ ಮೂಲಕ ಕೆಲಸ ನಿರ್ವಹಿಸುವ ಯಾವುದೇ ಸಂಘಗಳಿಗೆ ಕೇಡು ಉಂಟಾಗುವುದಿಲ್ಲ. ಅಂತಹ ಸೇವಾ ಕಾರ್ಯವನ್ನು ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಮಾಡಿಕೊಂಡು ಬರುತ್ತಿದೆ ಎಂದರು.
ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಧ್ವನಿ ಬೆಳಕು ಸಂಘಟನೆ ಅತ್ಯಂತ ವಿಶಿಷ್ಟವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಒಂದೇ ಸಭಾಂಗಣದಲ್ಲಿ ನಾಲ್ಕು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸೇವಾ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದೆ ಎಂದರು. ಬಂಟ್ವಾಳ ಲಯನ್ಸ್ ಕ್ಲಬ್ ವಿಶೇಷ ಚೇತನ ಮಕ್ಕಳ ಅನುಕೂಲಕ್ಕಾಗಿ ಫಿಸಿಯೋಥೆರಪಿ ಕೇಂದ್ರವನ್ನು ನಡೆಸಿಕೊಂಡು ಬರುತ್ತಿದ್ದು ವಾರ್ಷಿಕ ೬ ಲಕ್ಷ ರುಪಾಯಿ ಹಣವನ್ನು ಈ ಕೇಂದ್ರಕ್ಕಾಗಿ ವಿನಿಯೋಗಿಸಿಸುತ್ತಿದೆ ಎಂದರು.
ಒಕ್ಕೂಟದ ಹಿರಿಯ ಸಾಧಕರಾದ ಇಬ್ರಾಹಿಂ, ಸದಾನಂದ ಗೌಡ, ಸೋಮಪ್ಪ ಪೂಜಾರಿ, ಮೋಹನ ಸಪಲ್ಯ, ಲಿಂಗಪ್ಪ ನಾಯ್ಕ, ದಿವಾಕರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಕಾರ್ಮಿಕರಾದ ದಿವಾಕರ ಪೂಜಾರಿ, ಸುಂದರ ಪೂಜಾರಿ, ಕೃಷ್ಣಪ್ಪ, ಬಾಲಕೃಷ್ಣ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಫರಂಗಿಪೇಟೆ ವಲಯ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ, ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ, ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಶೇಖ್ ಸುಭಾನ್ ಉಪಸ್ಥಿತರಿದ್ದರು.