ಅಂಗನವಾಡಿ ಕೇಂದ್ರದ ಛಾವಣಿ ಕುಸಿತ ,ಮಕ್ಕಳು ಪಾರು
ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಗ್ರಾಪಂ ವ್ಯಾಪ್ತಿಯ ಕರ್ಪೆ ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಹಳೆಯ ಅಂಗನವಾಡಿ ಕೇಂದ್ರವೊಂದರ ಛಾವಣಿ ಕುಸಿದು ಬಿದ್ದ ಘಟನೆ ಬುಧವಾರ ಸಂಭವಿಸಿದ್ದು,ಅದೃಷ್ಟವಶಾತ್ ಕೇಂದ್ರದಲ್ಲಿದ್ದ ಪುಟಾಣಿ ಮಕ್ಕಳು ಪಾರಾಗಿದ್ದಾರೆ. ಕರ್ಪೆ ಗ್ರಾಮದ ಕರ್ಪೆ ಅಂಚೆಕಚೇರಿಯಲ್ಲಿ ಕಾರ್ಯಾಚರಿಸುತ್ತಿರುವ ಈ ಅಂಗನವಾಡಿ ಕೇಂದ್ರದ ಛಾವಣಿಯ ಒಂದು ಪಾಶ್ವ೯ ಬೆಳಿಗ್ಗೆ ಸುಮಾರು 10.30 ರ ವೇಳೆಗೆ ಹಠಾತ್ತನೆ ಕುಸಿದು ಬಿದ್ದಿದೆ.ಸುಮಾರು 28 ವರ್ಷಗಳ ಹಳೆಯದಾದ ಹಂಚಿನ ಛಾವಣಿಯ ಅಂಗನವಾಡಿ ಕೇಂದ್ರ ತನ್ನ ಅಯುಷ್ಯ ಕಳೆದುಕೊಂಡು ಮುರಿದು ಬಿದ್ದಿದೆ. ಈ ಘಟನೆಯ ವೇಳೆ ಅಂಗನವಾಡಿ ಕೇಂದ್ರ ದಲ್ಲಿ ಸುಮಾರು 25 ಪುಟಾಣಿಗಳಿದ್ದರು.
ಅಂಗನವಾಡಿ ಕೇಂದ್ರದ ಹಂಚು ಬಿದ್ದ ಸದ್ದು ಕೇಳುತ್ತಿದ್ದಂತೆ ಗಲಿಬಿಲಿಗೊಂಡ ಮಕ್ಕಳು ಹೆದರಿಕೊಂಡು ಹೊರಕ್ಕೆ ಓಡಿಬಂದಿದ್ದಾರೆ.ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದಿದ್ದರಿಂದ ಮಕ್ಕಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ.ಸುದ್ದಿ ತಿಳಿದ ಜಿಪಂ ಸದಸ್ಯ ತುಂಗಪ್ಪ ಬಂಗೇರ,ತಾಪಂಸದಸ್ಯ ಪ್ರಭಾಕರಪ್ರಭು ಗ್ರಾಪಂಸದಸ್ಯ ದೇವಪ್ಪ ಕರ್ಕೇರ ಮೊದಲಾದವರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಅಂಗನವಾಡಿ ಕೇಂದ್ರ ರಿಪೇರಿ ಅಗುವವರೆಗೆ ಬದಲಿ ವ್ಯವಸ್ಥೆ ಮಾಡುವಂತೆ ಕಾರ್ಯಕರ್ತೆಗೆ ಸೂಚಿಸಿದರು.