2020 ಅದಮಾರು ಪರ್ಯಾಯ: ದರ್ಬಾರಿನಲ್ಲಿ ಬದಲಾವಣೆ

ಉಡುಪಿ: ಮುಂಬರುವ ಅದಮಾರು ಪರ್ಯಾಯ ಮಹೋತ್ಸವದಲ್ಲಿ ಜನವರಿ 18ರ ಬೆಳಿಗ್ಗೆಯ ಬದಲು ಮಧ್ಯಾಹ್ನ 3 ಗಂಟೆಗೆ ಪರ್ಯಾಯ ದರ್ಬಾರು ನಡೆಸಲು ಉದ್ದೇಶಿಸಲಾಗಿದ್ದು, ಇದರಿಂದ ಎಲ್ಲ ಭಕ್ತರಿಗೆ ಪರ್ಯಾಯ ದರ್ಬಾರು ವೀಕ್ಷಿಸಲು ಅನುಕೂಲವಾಗಲಿದೆ ಎಂದು ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ಸ್ವಾಮೀಜಿ ಹೇಳಿದರು.


ಉಡುಪಿ ಪೂರ್ಣಪ್ರಜ್ಞಾ ಆಡಿಟೋರಿಯಂನ ಸಭಾಂಗಣದಲ್ಲಿ ಶನಿವಾರ ನಡೆದ ಉಡುಪಿ ಅದಮಾರು ಮಠದ ಪರ್ಯಾಯ ಮಹೋತ್ಸವದ ಪೂರ್ವ ಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಪರ್ಯಾಯ ಮೆರವಣಿಗೆ ವಿಕ್ಷೀಸಿ ಭಕ್ತರು ಸುಸ್ತಾಗಿರುವುದರಿಂದ ಮತ್ತು ಸ್ವಾಮೀಜಿಗೆ ಪೂಜೆ ನಡೆಸಿ ವಿಶ್ರಾಂತಿ ಪಡೆಯುವ ಉದ್ದೇಶದಿಂದ ಈ ರೀತಿಯ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಎಲ್ಲ ಮಠಾಧೀಶರು ಒಪ್ಪಿಗೆ ಸೂಚಿಸಿದ್ದಾರೆ ಎಂದರು.


ಪರ್ಯಾಯ ಅವಽಧಿಯಲ್ಲಿ ನೈಸರ್ಗಿಕ ವಸ್ತುಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಪ್ಲಾಸ್ಟಿಕ್‌ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಭಕ್ತರಿಗೆ ಅರಿವು ಮೂಡಿಸಲಾಗುವುದು. ಭೋಜನಕ್ಕೆ ಬಳಸುವ ಬಾಳೆಎಲೆಗಾಗಿ ಚಾರಾ ಗ್ರಾಮದ 10 ಎಕರೆ ಜಾಗದಲ್ಲಿ ಈಗಾಗಲೇ ಬಾಳೆತೋಟವನ್ನು ಬೆಳೆಸಲಾಗಿದೆ. ಈ ಬಾರಿಯ ಪರ್ಯಾಯವನ್ನು ವಿಜೃಂಭಣೆ ಜತೆಗೆ ಕಡಿಮೆ ಖರ್ಚಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು.


ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಮಾತನಾಡಿ, ಮುಂದಿನ ಅದಮಾರು ಮಠದ ಪರ್ಯಾಯ ಮಹೋತ್ಸವದ ಸಲುವಾಗಿ ತೆಗೆದುಕೊಂಡಿರುವ ಕೆಲ ಹೊಸ ಚಿಂತನೆಗಳು ಕಿರಿಯ ಯತಿಗಳದ್ದೇ ಆಗಿದೆ. 15 ದಿನಗಳಿಗೊಮ್ಮೆ ನಡೆಯುವ ಹೊರೆಕಾಣಿಕೆಯಿಂದ ಭಕ್ತರು ವರ್ಷ ಇಡೀ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಆರಾಧನೆ ಮಾಡಬಹುದಾಗಿದೆ ಎಂದರು. ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವರಾದ ವಿನಯ ಕುಮಾರ್‌ ಸೊರಕೆ, ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಎ.ಜಿ. ಕೊಡ್ಗಿ ಮಾತನಾಡಿದರು. ಕೃಷ್ಣಾ ಸೇವಾ ಬಳಗದ ಅಧ್ಯಕ್ಷ ಎಂ.ಬಿ. ಪುರಾಣಿಕ್‌ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಡಾ. ಜಗದೀಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!