ಅಫ್ಘಾನಿಸ್ಥಾನ ವಿಶ್ವಕಪ್ ತಂಡ: ಮರಳಿದ ಹಮಿದ್ ಹಸನ್
ಕಾಬೂಲ್: ಅಫ್ಘಾನಿಸ್ಥಾನದ ವಿಶ್ವಕಪ್ ತಂಡ ಸೋಮವಾರ ಪ್ರಕಟ ಗೊಂಡಿದೆ. ಸೀಮ್ ಬೌಲರ್ ಹಮಿದ್ ಹಸನ್ ಅವರನ್ನು 3 ವರ್ಷಗಳ ಬಳಿಕ ಕರೆಸಿಕೊಂಡದ್ದು ಈ ತಂಡದ ಅಚ್ಚರಿ.
ವಿಶ್ವಕಪ್ನಂಥ ಪ್ರಮುಖ ಪಂದ್ಯಾವಳಿಯ ವೇಳೆ ತಂಡದ ನಾಯಕತ್ವದಲ್ಲಿ ಬದಲಾವಣೆ ಬೇಡ ಎಂದು ಸೀನಿಯರ್ಗಳಾದ ರಶೀದ್ ಖಾನ್, ಮೊಹಮ್ಮದ್ ನಬಿ ಸಾರ್ವಜನಿಕ ಹೇಳಿಕೆ ನೀಡಿದರೂ ಗುಲ್ಬದಿನ್ ನೈಬ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ.
2016ರಲ್ಲಿ ಕೊನೆಯ ಪಂದ್ಯ
ಹಮಿದ್ ಹಸನ್ 2016ರ ಜುಲೈಯಲ್ಲಿ ಕೊನೆಯ ಸಲ ಏಕದಿನ ಪಂದ್ಯವಾಡಿದ್ದರು. ಅನಂತರ ಗಾಯಾ ಳಾಗಿ ಹೊರಗುಳಿಯಬೇಕಾಯಿತು. 2017ರ ಡಿಸೆಂಬರ್ ತನಕ ಪ್ರಥಮ ದರ್ಜೆ ಕ್ರಿಕೆಟ್ನಲ್ಲೂ ಆಡಲಿಲ್ಲ. ಕಳೆದ ವರ್ಷ ಫೆಬ್ರವರಿಯಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಗೆ ಆಯ್ಕೆಯಾದರೂ ಅಭ್ಯಾಸದ ವೇಳೆಯೇ ಗಾಯಾಳಾಗಿ ಮತ್ತೆ ತಂಡದಿಂದ ಬೇರ್ಪಟ್ಟರು. 2015ರ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹಸನ್, 8 ವಿಕೆಟ್ ಕಿತ್ತು ಗಮನ ಸೆಳೆದಿದ್ದರು.
ಜಹೀರ್ ಖಾನ್, ಇಕ್ರಾಮ್ ಅಲಿಖೀಲ್, ಕರೀಂ ಜನತ್, ಸಯ್ಯದ್ ಶಿರ್ಜಾದ್, ಜಾವೇದ್ ಅಹ್ಮದಿ, ಶಪೂರ್ ಜದ್ರಾನ್ ಮತ್ತು ಫರೀದ್ ಮಲಿಕ್ ಅವರನ್ನು ಕೈಬಿಡಲಾಗಿದೆ. ಅಫ್ಘಾನ್ ತನ್ನ ಮೊದಲ ಪಂದ್ಯವನ್ನು ಜೂ. ಒಂದರಂದು ಆಸ್ಟ್ರೇಲಿಯ ವಿರುದ್ಧ ಬ್ರಿಸ್ಟಲ್ನಲ್ಲಿ ಆಡಲಿದೆ.
ಅಫ್ಘಾನಿಸ್ಥಾನ ತಂಡ
ಗುಲ್ಬದಿನ್ ನೈಬ್ (ನಾಯಕ), ಮೊಹಮ್ಮದ್ ಶಾಜಾದ್, ನೂರ್ ಅಲಿ ಜದ್ರಾನ್, ಹಜ್ರತುಲ್ಲ ಜಜಾರಿ, ರೆಹಮತ್ ಷಾ, ಅಸYರ್ ಅಫ್ಘಾನ್, ಹಶ್ಮತುಲ್ಲ ಶಾಹಿದಿ, ನಜಿಬುಲ್ಲ ಜದ್ರಾನ್, ಸಮಿಯುಲ್ಲ ಶಿನ್ವರಿ, ಮೊಹಮ್ಮದ್ ನಬಿ, ರಶೀದ್ ಖಾನ್, ದೌಲತ್ ಜದ್ರಾನ್, ಅಫ್ತಾಬ್ ಆಲಂ, ಹಮೀದ್ ಹಸನ್, ಮುಜೀಬ್ ಉರ್ ರೆಹಮಾನ್