ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ : ಸಿಎಂ ಗೆ ಮನವಿ ಸಲ್ಲಿಸಿದ ಕರವೇ
ಮಡಿಕೇರಿ : ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಉನೈಸ್ ಪೆರಾಜೆ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕೊಡಗು ಜಿಲ್ಲೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಪ್ರತಿದಿನ ಹತ್ತಾರು ಅಪಘಾತಗಳು ಸಂಭವಿಸುತ್ತಿವೆ. ಗಾಯಾಳುಗಳ ಜೀವ ಉಳಿಸಲು ದೂರದ ಜಿಲ್ಲೆಗಳ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ದುಸ್ಥಿತಿ ಇದೆ. ಅಲ್ಲದೆ ಜಿಲ್ಲೆಯಲ್ಲಿ ಕಾರ್ಮಿಕ ವರ್ಗದ ಸಂಖ್ಯೆ ಹೆಚ್ಚು ಇದ್ದು, ವನ್ಯಜೀವಿ ದಾಳಿ ಸೇರಿದಂತೆ ಇನ್ನಿತರ ಅವಘಡಗಳಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿ ಪರದಾಡುವವರನ್ನು ಉಳಿಸಿಕೊಳ್ಳಲು ಅಕ್ಕಪಕ್ಕದ ಜಿಲ್ಲೆಯ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ.
ಆದ್ದರಿಂದ ಸರಕಾರ ತಕ್ಷಣ ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿಕೊಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ. ಈ ಮನವಿಗೆ ಮುಖ್ಯಮಂತ್ರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಉನೈಸ್ ಪೆರಾಜೆ ತಿಳಿಸಿದರು. ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲ್ಲೂಕಿನ ಮಳೂರು ಹೋಬಳಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಸಂದರ್ಭ ರಾಮನಗರ ಜಿಲ್ಲಾಧ್ಯಕ್ಷ ಶಿವುಗೌಡ ಹಾಜರಿದ್ದರು.