ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಪುಟ್ಟ ಕಂದಮ್ಮನನ್ನು ಕಳೆದುಕೊಂಡ ತಾಯಿ

ಉಡುಪಿ: ಒಂದು ವರ್ಷದ ಹಸುಳೆಯ ಅಪಹರಣ ಪ್ರಕರಣವು  ಜಿಲ್ಲೆಯನ್ನೇ ಬೆಚ್ಚಿ ಬಿಳಿಸಿದ ಘಟನೆಗೆ ಟ್ವಿಸ್ಟ್. ಜುಲೈ 11 ರಂದು ಬೆಳಗ್ಗಿನ ಜಾವ 4:30ಕ್ಕೆ ಯಾರೋ ಅಪರಿಚಿತ  ವ್ಯಕ್ತಿ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಮಲಗಿದ್ದ 1 ವರ್ಷ 3  ತಿಂಗಳಿನ ಹೆಣ್ಣು ಮಗು ಸಾನ್ವಿಕಾಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಎಂದು ಯಡಮೊಗ್ಗೆ ಗ್ರಾಮದ ಶ್ರೀಮತಿ ರೇಖಾರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜುಲೈ12 ರಂದು ಮಗು ಸಾನ್ವಿಕಾಳ ಮೃತದೇಹವು ಅವರ ಮನೆಯಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಕುಬ್ಜಾ ನದಿಯಲ್ಲಿ ಪತ್ತೆಯಾಗಿರುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ  ರೇಖಾರವರನ್ನು ಕೂಲಂಕುಶವಾಗಿ ವಿಚಾರಣೆಗೆ ಒಳಪಡಿಸಿದಾಗ, ಅವರು  ಸಾಯಬೇಕೆಂಬ ಉದ್ದೇಶದಿಂದ ಅವರ 5 ವರ್ಷದ ಮಗ ಸಾತ್ವಿಕ್ ಹಾಗೂ ಮಗು ಸಾನ್ವಿಕಾಳನ್ನು ಎತ್ತಿಕೊಂಡು ಮನೆಯ ಪಕ್ಕದ ಕುಬ್ಜಾ ಹೊಳೆಗೆ ಇಳಿದಿದ್ದು, ಆ ಸಮಯ ಅವರ ಬಲಕೈಯಲ್ಲಿದ್ದ ಮಗು ಸಾನ್ವಿಕಾಳು ಕೈಯಿಂದ ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ.

ಮಗುವನ್ನು ಹಿಡಿಯಲು ರೇಖಾರವರು ಹೋದಾಗ ಅವರ ಇನ್ನೊಂದು ಕೈಯಲ್ಲಿದ್ದ ಮಗ ಸಾತ್ವಿಕ್‌ನೊಂದಿಗೆ ಹೊಳೆಯ ನೀರಿನಲ್ಲಿ ಕೊಚ್ಚಿ ಹೋಗಿರುತ್ತಾರೆ. ಸುಮಾರು ದೂರ ಕೊಚ್ಚಿ ಹೋದ ಅವರು ಮತ್ತು ಅವರ ಗಂಡು ಮಗು ಹೊಳೆಯ ದಡ ಸೇರಿ ಬದುಕುಳಿದಿರುತ್ತಾರೆ.ಆದರೆ ಹೆಣ್ಣು ಮಗು ಸಾನ್ವಿಕಾ ಹೊಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುತ್ತಾಳೆ. ರೇಖಾರವರು ಹೆದರಿ ಮಗು ಅಪಹರಣವಾದಂತೆ ದೂರು ನೀಡಿರುವುದಾಗಿ ತಮ್ಮ ಹೇಳಿಕೆಯನ್ನು ನೀಡಿರುತ್ತಾರೆ ಇವರ ಹೇಳಿಕೆಯನ್ನು ಆಧರಿಸಿ ತನಿಖೆಯನ್ನು ಮುಂದುವರೆಸಲಾಗಿದೆ.

ಇನ್ನೂ ವಿಚಾರಣೆಯ ಸಮಯದಲ್ಲಿ ನುರಿತ ಮನೋ ವೈದ್ಯರಿಂದ ಆಪ್ತ ಸಮೋಲೋಚನೆ ನಡೆಸಿ ವಿಚಾರಣೆ ನಡೆಸಿದ್ದು ವೈದ್ಯ ಆಕೆಯು ಮಾನಸಿಕ ಖಿನ್ನತೆಯಲ್ಲಿರುವುದಾಗಿದ್ದು ಸೂಕ್ತ ಚಿಕಿತ್ಸೆ ಅಗತ್ಯವೆಂದು ಸಲಹೆಯನ್ನು ನೀಡಿರುತ್ತಾರೆ. ಆದುದರಿಂದ ಆಕೆ ಡಾ.ಎ.ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆ ಉಡುಪಿಯಲ್ಲಿ ಒಳರೋಗಿಯಾಗಿ ದಾಖಲಿಸಿ, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಪ್ರಕರಣದ ಸಮಗ್ರವಾದ ತನಿಖೆಯನ್ನು ಚಿಕಿತ್ಸೆಯನ್ನು ಮುಗಿಸಿ ಮಾನಸಿಕ ಖಿನ್ನತೆಯಿಂದ ಹೊರ ಬಂದು ಸಂಪೂರ್ಣ ಶಕ್ತಳಾದ ಮೇಲೆ ತನಿಖೆ ಮುಂದುವರೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!